ಬೆಂಗಳೂರು :ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಗತ್ಯವಿರುವ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಗೆ ಒಳ್ಳೆಯ ಸ್ಪಂದನೆ ವ್ಯಕ್ತವಾಗಿದೆ. ಶುಕ್ರವಾರ ಒಂದೇ ದಿನ 25 ಸಾವಿರಕ್ಕೂ ಹೆಚ್ಚು ಅರ್ಹರು ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ 55 ಸಾವಿರಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದಂತಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಸರ್ಕಾರ ಅಭಿವೃದ್ಧಿ ಪಡಿಸಿರುವ ಆನ್-ಲೈನ್ ಪೋರ್ಟಲ್ ಮೂಲಕ ಅರ್ಜಿ ಕಳಿಸಲು ಶುಕ್ರವಾರ ಅಂತಿಮ ದಿನವಾಗಿತ್ತು. ಗುರುವಾರ ರಾತ್ರಿಯವರೆಗೂ 30,100 ಮಂದಿ ಅರ್ಜಿ ಸಲ್ಲಿಸಿದ್ದರು. ಕೊನೆಯ ದಿನ ದಾಖಲೆ ಸಂಖ್ಯೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ರಾತ್ರಿ 9 ಗಂಟೆವರೆಗೆ ಒಟ್ಟು 55,678 ಅರ್ಜಿಗಳು ಬಂದಿವೆ. ಅರ್ಜಿ ಹಾಕಲು ಮಧ್ಯರಾತ್ರಿಯವರೆಗೂ ಅವಕಾಶವಿದ್ದು, ಕೊನೆಯ ಕ್ಷಣಗಳಲ್ಲಿ ನೂರಾರು ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳುವ ನಿರೀಕ್ಷೆ ಇದೆ ಎಂದಿದ್ದಾರೆ.