ಬೆಂಗಳೂರು:ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ನಿನ್ನೆ ಒಂದೇ ದಿನ 60.78 ಲಕ್ಷ ಮಹಿಳಾ ಪ್ರಯಾಣಿಕರು ಸರ್ಕಾರಿ ಬಸ್ಗಳಲ್ಲಿ ಸಂಚರಿಸಿದ್ದಾರೆ. ಇದರ ಟಿಕೆಟ್ ಮೌಲ್ಯ 13.64 ಲಕ್ಷ ರೂ.ಗಳಾಗಿದ್ದು, ಯೋಜನೆ ಜಾರಿಯಾದ ದಿನದಿಂದ ಇಲ್ಲಿಯವರೆಗೂ ಮಹಿಳಾ ಪ್ರಯಾಣಿಕರ ಉಚಿತ ಟಿಕೆಟ್ ಮೌಲ್ಯ 222 ಕೋಟಿ ರೂಪಾಯಿಗಳಾಗಿದೆ.
ಜೂನ್ 28ರಂದು ಕೆಎಸ್ಆರ್ಟಿಸಿ ಬಸ್ಗಳಲ್ಲಿ 17,97,487 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, 4,88,17,069 ಟಿಕೆಟ್ ಮೌಲ್ಯವಾಗಿದೆ. ಬಿಎಂಟಿಸಿಯಲ್ಲಿ 19,85,022 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಉಚಿತ ಟಿಕೆಟ್ ಮೌಲ್ಯ 2,52,51,690 ರೂ.ಗಳಾಗಿದೆ. ವಾಯುವ್ಯ ಕರ್ನಾಟಕ ಸಾರಿಗೆಯಲ್ಲಿ 14,61,168 ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದು, ಟಿಕೆಟ್ ಮೌಲ್ಯ 3,57,51,650 ರೂ.ಗಳಾಗಿದೆ. ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಬಸ್ಗಳಲ್ಲಿ 8,36,562 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಇವರ ಟಿಕೆಟ್ ಮೌಲ್ಯ 2,66,22,130 ರೂ.ಗಳಾಗಿದೆ. ಒಟ್ಟು ನಿನ್ನೆ ಒಂದೇ ದಿನ ನಾಲ್ಕು ನಿಗಮಗಳ ಬಸ್ಗಳಲ್ಲಿ ಒಟ್ಟೂ 60,78,239 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಇವರ ಉಚಿತ ಟಿಕೆಟ್ ಮೌಲ್ಯ 13,64,42,539 ರೂ.ಗಳಾಗಿದೆ.
ಕಳೆದ 18 ದಿನಗಳಲ್ಲಿ ನಾಲ್ಕು ನಿಗಮಗಳಿಂದ ಒಟ್ಟು 9,46,35,508 ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದು, ಇದರ ಒಟ್ಟು ಟಿಕೆಟ್ ಮೌಲ್ಯ 222,00,79,232 ರೂ.ಗಳಾಗಿದೆ. ಇಷ್ಟೂ ಮೊತ್ತವನ್ನು ರಾಜ್ಯ ಸರ್ಕಾರ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಪಾವತಿ ಮಾಡಬೇಕಾಗಿದ್ದು, ಬಜೆಟ್ನಲ್ಲಿ ಹಣಕಾಸು ಪೂರೈಸಲು ಅನುದಾನ ಮೀಸಲಿಡಲಿದೆ.