ಬೆಂಗಳೂರು:ಗುಜರಾತ್ ಚುನಾವಣೆ ಬಳಿಕ ಕರ್ನಾಟಕದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಗೆಲ್ಲಲು ಯಾವೆಲ್ಲ ತಂತ್ರಗಳನ್ನು ಮಾಡುತ್ತಿದೆ ಅನ್ನೋದು ಗೊತ್ತಿದೆ. ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಇದೆ ಅನ್ನುವುದನ್ನೇ ಎಲ್ಲರೂ ಮರೆತಿದ್ದಾರೆ, ಆದರೂ ನನಗೆ ಬೇಸರ ಇಲ್ಲ. ಬರುವ ದಿನಗಳಲ್ಲಿ ಜೆಡಿಎಸ್ ತನ್ನ ಶಕ್ತಿ ಎಂಥದ್ದು ಎಂಬುದನ್ನು ತೋರಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಚಾಮರಾಜಪೇಟೆ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದರಾಜು ಹಾಗೂ ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಗೌರಮ್ಮ, ಮಾಜಿ ಉಪಮೇಯರ್ ರಾಮೇಗೌಡ, ಶಿಕಾರಿಪುರದ ಮಾಜಿ ಶಾಸಕರು ಸೇರಿದಂತೆ 53 ಕ್ಕೂ ಹೆಚ್ಚು ಸ್ಥಳೀಯ ಮುಖಂಡರ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಂಚರತ್ನ ರಥಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಧ್ಯರಾತ್ರಿ 2 ಗಂಟೆಗೆ ಜನ ಸೇರಿ ಸ್ವಾಗತ ಕೋರುತ್ತಿದ್ದಾರೆ. ಬೆಂಗಳೂರಿನಲ್ಲಿ ಕೂಡ ಜೆಡಿಎಸ್ ಅನೇಕ ಕ್ಷೇತ್ರ ಗೆಲ್ಲುವ ನಿರೀಕ್ಷೆ ಇದೆ ಎಂದರು.
ಪೋಲಿಸ್ ಇಲಾಖೆಯಿಂದ ಜನರಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ಇದೆ. ಬೆಂಗಳೂರು ನಗರದಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿಗಿಂತ ಅತಿ ಹೆಚ್ಚು ಕ್ಷೇತ್ರ ಗೆಲ್ಲುವ ಭರವಸೆಯಿದೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಆಂತರಿಕ ಸಮೀಕ್ಷೆಗಳಲ್ಲೆ ಜೆಡಿಎಸ್ 50 ಸ್ಥಾನ ತಲುಪುತ್ತದೆ ಅಂತ ಬರ್ತಿದೆ. 50 ಕ್ಷೇತ್ರ ಮಾತ್ರವಲ್ಲ, ಜೆಡಿಎಸ್ 123 ಕ್ಷೇತ್ರ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಾಮರಾಜಪೇಟೆ ಹಿಂದೆ ಯಾವ ತರ ಇತ್ತು ಮತ್ತು ಬಳಿಕ ದೇವೇಗೌಡರು ಯಾವ ತರ ಶ್ರಮ ಹಾಕಿದ್ರು ಅದಕ್ಕೆಲ್ಲಾ ಒಂದು ಇತಿಹಾಸವಿದೆ. ಈಗ ಮತ್ತೊಮ್ಮೆ ಜೆಡಿಎಸ್ ಅಲ್ಲಿ ಗೆಲ್ಲಬೇಕು. ಹಣ ಹಂಚೋದು ದೊಡ್ಡದಲ್ಲ. ಆದರೆ ಆ ಹಣ ಹೇಗೆ ಸಂಗ್ರಹ ಆಗಿದೆ ಅದನ್ನು ಗಮನಿಸಬೇಕು ಎಂದು ಶಾಸಕ ಜಮೀರ್ ಅಹ್ಮದ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಚಾಮರಾಜಪೇಟೆ ಜೆಡಿಎಸ್ ಪಾಲು : ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಚಾಮರಾಜಪೇಟೆ ಜೆಡಿಎಸ್ ಗೆಲ್ಲುವ ಮೊದಲ ಕ್ಷೇತ್ರ ಆಗಲಿದೆ. ಚಾಮರಾಜಪೇಟೆಯಲ್ಲಿ ಹೊಸ ಪರಿವರ್ತನೆ ತರಬೇಕಾಗಿದೆ. ಇಲ್ಲಿ ಏನೇನೋ ನಡೆಯುತ್ತಿದೆ ಅನ್ನೋದು ನನಗೆ ಗೊತ್ತಿದೆ. ಚಾಮರಾಜಪೇಟೆ ಒಗ್ಗಟ್ಟಿನ ಕ್ಷೇತ್ರ. ಪಕ್ಷ ಅಂತಿಮವಾಗಿ ಏನು ನಿರ್ಧಾರ ಮಾಡುವುದೋ ಅದನ್ನು ಸ್ಥಳೀಯ ನಾಯಕರು ಒಪ್ಪಬೇಕಾಗುತ್ತದೆ ಎಂದು ಸಲಹೆ ನೀಡಿದರು.