ಬೆಂಗಳೂರು: ಸೂಕ್ತ ದಾಖಲಾತಿ ಇಲ್ಲದೆ ನಗರದಲ್ಲಿ ಓಡಾಡುತ್ತಿದ್ದ ದುಬಾರಿ ಬೆಲೆಯ ಕಾರುಗಳನ್ನು ಆರ್ಟಿಒಗಳು ದಾಳಿ ನಡೆಸಿ ಜಪ್ತಿ ಮಾಡಿಕೊಂಡಿದ್ದಾರೆ.
10 ಕ್ಕೂ ಹೆಚ್ಚು ಐಶಾರಾಮಿ ಕಾರ್ಗಳ ವಶ :ನಕಲಿ ದಾಖಲೆಗಳು, ರೋಡ್ ಟ್ಯಾಕ್ಸ್ ವಂಚಿಸಿ ಓಡಾಡುತ್ತಿದ್ದ ಐಷರಾಮಿ ಕಾರುಗಳ ಮಾಲೀಕರಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಹೆಚ್ಚಾಗಿ ವೀಕೆಂಡ್ ನಲ್ಲೇ ಹೆಚ್ಚಾಗಿ ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸುವ ದುಬಾರಿ ಕಾರುಗಳನ್ನ ತಡೆದು ಪರಿಶೀಲಿಸಿದಾಗ ಅಕ್ರಮವಾಗಿ ಓಡಾಡ್ತಿರುವುದು ಬೆಳಕಿಗೆ ಬಂದಿದೆ.
ಸಾರಿಗೆ ಇಲಾಖೆ ಅಪರ ಆಯುಕ್ತ ನರೇಂದ್ರ ಹೋಳ್ಕರ್, ಇನ್ಸ್ಪೆಕ್ಟರ್ ತಿಪ್ಪೇಸ್ವಾಮಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ವೇಳೆ ಸುಳ್ಳು ದಾಖಲಾತಿ ನೀಡಿ ನೋಂದಣಿ ಮಾಡಿ ಕೊಂಡಿರುವುದು, ಇನ್ನೂ ಮೂಲ ಮಾಲೀಕನ ಹೆಸರಿನಲ್ಲೇ ಇರುವ ಬರೋಬ್ಬರಿ 10ಕ್ಕೂ ಅಧಿಕ ಐಷಾರಾಮಿ ಕಾರುಗಳು ಪತ್ತೆಯಾಗಿವೆ.
ಅಮಿತಾಬ್ ಬಚ್ಚನ್ ಹೆಸರಿನಲ್ಲಿರುವ ಕಾರ್ ವಶ :ಈ ವೇಳೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಹೆಸರಿನಲ್ಲಿ ನೋಂದಣಿಯಾಗಿರುವ ರೋಲ್ಸ್ ರಾಯ್ ಕಾರ್ ಸಹ ಸೀಜ್ ಮಾಡಿದ್ದಾರೆ. ವಶಕ್ಕೆ ಪಡೆದುಕೊಂಡ ವಾಹನಗಳ ಪೈಕಿ ವಿಧಾನಪರಿಷತ್ ಸದಸ್ಯ ಫಾರೂಕ್ಗೆ ಸೇರಿದ ಎರಡು ಐಶಾರಾಮಿ ಕಾರುಗಳು ಸೇರಿವೆ. 2 ವರ್ಷಗಳಿಂದಲೂ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಒಡೆತನದ ರೋಲ್ಸ್ ರಾಯ್ಸ್ ಕಾರು ಬೆಂಗಳೂರಿನಲ್ಲಿ ಓಡಾಡುತ್ತಿತ್ತು. ಆದರೂ ಒಮ್ಮೆಯೂ ಅಧಿಕಾರಿಗಳು ಪರಿಶೀಲನೆ ನಡೆಸಿರಲಿಲ್ಲ.
ಅಮಿತಾಬ್ ಬಚ್ಚನ್ ಕಾರು ಸೇರಿ ದಾಖಲೆ ಇಲ್ಲದ 10ಕ್ಕೂ ಹೆಚ್ಚು ಐಶಾರಾಮಿ ವಾಹನಗಳ ಜಪ್ತಿ ಉಮ್ರಾ ಡೆವಲಪರ್ಸ್ ಮಾಲೀಕ ಬಾಬು ಎಂಬಾತ ಅಮಿತಾಬ್ ಬಚ್ಚನ್ ರಿಂದ 6 ಕೋಟಿಗೆ ಈ ಕಾರನ್ನು ಖರೀದಿಸಿದ್ದ. ಪ್ರಮುಖ ವಿಷಯ ಎಂದರೆ ಈ ರೋಲ್ಸ್ ರಾಯ್ಸ್ ಕಾರು ಇನ್ನೂ ಸಹ ಅಮಿತಾಬ್ ಹೆಸರಿನಲ್ಲೇ ಇದೆ ಎಂದು ಪರಿಶೀಲನೆ ವೇಳೆ ತಿಳಿದು ಬಂದಿದೆ.
ಕಾರ್ ಮಾಲೀಕನಿಗೆ ಎಚ್ಚರಿಕೆ :ಕಾರನ್ನು ಸ್ಥಳದಲ್ಲೇ ಜಪ್ತಿ ಮಾಡಲಾಗಿದೆ. ನೆಲಮಂಗಲದ ಸ್ಟಾಕ್ ಯಾರ್ಡ್ ಗೆ ಶಿಫ್ಟ್ ಮಾಡುವಾಗ ಹೈಡ್ರಾಮಾವೇ ನಡೆಯಿತು. ಖುದ್ದು ಸ್ಥಳಕ್ಕೆ ಆಗಮಿಸಿದ ಮಾಲೀಕ ಬಾಬು, ಅಧಿಕಾರಿಗಳ ಮುಂದೆ ಸಬೂಬು ಹೇಳಿದರಾದರೂ ಯಾವುದೇ ಸೊಪ್ಪು ಹಾಕದ ಸಾರಿಗೆ ಇಲಾಖೆ ಅಧಿಕಾರಿಗಳು, ನಿಮ್ಮದೇ ದಾಖಲೆಗಳನ್ನ ನೀಡಿ ನಂತರ ಕಾರ್ ಒಯ್ಯಿರಿ ಎಂದು ಹೇಳಿದರು.