ಬೆಂಗಳೂರು:ಹೈಕೋರ್ಟ್ ನೂತನವಾಗಿ ಆಗಮಿಸುತ್ತಿರುವ ನ್ಯಾಯಮೂರ್ತಿಗಳಿಗೆ ಒತ್ತಡ ಹೆಚ್ಚಾಗಿರಲಿದೆ ಎಂದು ಹೈಕೋರ್ಟ್‌ಗೆ ನೂತನವಾಗಿ ಪದೋನ್ನತಿ ಪಡೆದುಕೊಂಡಿರುವ ರಾಮಚಂದ್ರ ದತ್ತಾತ್ರೆಯ ಹುದ್ದಾರ ಮತ್ತು ವೆಂಕಟೇಶ ಟಿ. ನಾಯ್ಕ ಅವರಿಗೆ ಬೆಂಗಳೂರು ವಕೀಲರ ಸಂಘ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಅಲ್ಲದೆ, ರಾಜ್ಯ ಹೈಕೋರ್ಟ್‌ನ ನ್ಯಾಯಮೂರ್ತಿಗಳ ದೊಡ್ಡ ಕುಟುಂಬಕ್ಕೆ ಇವರಿಬ್ಬರ ಸೇರ್ಪಡೆಯಾಗಿದ್ದು, ಸ್ವಾಗತಾರ್ಹವಾಗಿದೆ. ಇಬ್ಬರೂ ತಮ್ಮ ಅವಧಿಯಲ್ಲಿ ಅತ್ಯತ್ತಮ ಕಾರ್ಯ ನಿರ್ವಹಿಸುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಪ್ರಸ್ತುತ ಇರುವ ಆಧುನಿಕ ತಂತ್ರಜ್ಞಾನಗಳ ಮುಖಾಂತರ ಪ್ರಕರಣಗಳ ಪೋಸ್ಟಿಂಗ್ ಮತು ಲಿಸ್ಟಿಂಗ್ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಆಗದಂತೆ ವ್ಯವಸ್ಥೆ ಆಗುತ್ತಿದೆ ಎಂದು ಅವರು ವಿವರಿಸಿದರು.
ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾಗಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದ ನ್ಯಾಯಮೂರ್ತಿ ರಾಮಚಂದ್ರ ದತ್ತಾತ್ರೆಯ ಹುದ್ದಾರ ಮಾತನಾಡಿ, ವಕೀಲರ ವೃಂದದಲ್ಲಿ ಹಿರಿಯ ವಕೀಲರನ್ನು ಗೌರವಿಸಿ ನಡೆದುಕೊಳ್ಳಬೇಕಾದ ಕಿರಿಯರು ಈ ಪರಂಪರೆಯನ್ನು ಕಡೆಗಣಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಜೊತೆಗೆ, ಹೆಚ್ಚು ಪ್ರಮಾಣದ ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳಬೇಕು ಆ ಮೂಲಕ ಜ್ಞಾನ ಹೆಚ್ಚಳಕ್ಕೆ ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದರು.