ಬೆಂಗಳೂರು:ಬಿಬಿಎಂಪಿ 2020 ಹೊಸ ವಿಧೇಯಕದ ಕುರಿತು ಜನಾಗ್ರಹ ಎನ್ಜಿಒ ಸಂಸ್ಥೆ ಆಯೋಜಿಸಿದ್ದ ವೆಬಿನಾರ್ನಲ್ಲಿ ಈ ಹೊಸ ಬಿಲ್ನ ಸಾಧಕ ಬಾಧಕದ ಕುರಿತು ನಗರದ ಮಾಜಿ ಪಾಲಿಕೆ ಸದಸ್ಯರು ಹಾಗೂ ಪ್ರಮುಖ ಪಕ್ಷಗಳ ಮುಖಂಡರು ಚರ್ಚೆ ನಡೆಸಿದರು.
ಬಿಬಿಎಂಪಿ 2020 ಬಿಲ್, ಕೆ.ಎಮ್.ಸಿಗೆ ಪರ್ಯಾಯವಾಗಿ ನಗರದಲ್ಲಿ ಜಾರಿಯಾಗುತ್ತಿದ್ದು, ಇದರ ವ್ಯಾಪಕ ಚರ್ಚೆಯಾಗದೆ ಜಾರಿಗೆ ತರುವುದು ಸರಿಯಲ್ಲ ಎಂದು ಮಾಜಿ ಪಾಲಿಕೆ ಸದಸ್ಯರಾದ ಪದ್ಮನಾಭ ರೆಡ್ಡಿ ಹಾಗೂ ಅಬ್ದುಲ್ ವಾಜಿದ್ ಅಭಿಪ್ರಾಯಪಟ್ಟರು.
ಅಲ್ಲದೆ ಈ ಬಿಲ್ನಲ್ಲಿ ಝೋನಲ್ ಕಮಿಟಿ, (ವಲಯವಾರು ಕಮಿಟಿ) ಬಗ್ಗೆ ಪ್ರಸ್ತಾಪಿಸಿದ್ದು, ಇದು ಚುನಾಯಿತ ಜನಪ್ರತಿನಿಧಿಗಳಿಗಿಂತ ಅಧಿಕಾರಿಗಳಿಗೇ ಹೆಚ್ಚು ಅಧಿಕಾರ ನೀಡುತ್ತಿರುವುದು ಸರಿಯಲ್ಲ. ಇದನ್ನು ರದ್ದು ಮಾಡಲು ರಘು ನೇತೃತ್ವದ ಶಾಸಕರ ಕಮಿಟಿಗೆ ಪತ್ರ ಬರೆಯಲಾಗುವುದು ಎಂದು ಪದ್ಮನಾಭ ರೆಡ್ಡಿ ತಿಳಿಸಿದರು.
ಜನಾಗ್ರಹ ಎನ್ಜಿಒ ಸಂಸ್ಥೆ ಆಯೋಜಿಸಿದ್ದ ವೆಬಿನಾರ್ ಜೊತೆಗೆ ಕೆ.ಎಂ.ಸಿ ಆಕ್ಟ್ನಲ್ಲಿ 509 ಸೆಕ್ಷನ್ಗಳಿವೆ. ಆದರೆ ಬಿಬಿಎಂಪಿ ಬಿಲ್ನಲ್ಲಿ ಕೇವಲ 197 ಸೆಕ್ಷನ್ಸ್ ಇದ್ದು, ಇನ್ನೂ ಹೆಚ್ಚು ಸೇರ್ಪಡೆ ಮಾಡುವ ಅಗತ್ಯ ಇದೆ ಎಂದರು. ಕೇವಲ ಮೇಯರ್ಗೆ ವೀಟೋ ಪವರ್ ನೀಡುವ ಬದಲು, ಇಡೀ ಕೌನ್ಸಿಲ್ನನ್ನು ಸುಪ್ರೀಮ್ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಅಬ್ದುಲ್ ವಾಜಿದ್ ಚರ್ಚೆಯಲ್ಲಿ ಭಾಗವಹಿಸಿ, ಕೇವಲ ಚುನಾವಣೆ ಮುಂದೂಡುವ ಸಲುವಾಗಿ ಈ ಬಿಲ್ ತರಬಾರದು. ಈ ಬಗ್ಗೆ ಚರ್ಚೆ ಆಗಬೇಕು. ಮೇಯರ್ ಅಧಿಕಾರ ಅವಧಿ ವಿಸ್ತರಣೆ ವಿಚಾರ ಸ್ವಾಗತಾರ್ಹ. ಜೊತೆಗೆ ವಾರ್ಡ್ ಕಮಿಟಿಯನ್ನು ಸಬಲಗೊಳಿಸಬೇಕು ಎಂದರು.
ಆಮ್ ಆದ್ಮಿ ಪಕ್ಷ ಈ ಹೊಸ ವಿಧೇಯಕ ಲೋಪದಿಂದ ಕೂಡಿರುವುದಾಗಿ ಚರ್ಚೆ ನಡೆಸಿದರು. ಬಿಬಿಎಂಪಿ ಕಾಮಗಾರಿಗಳು ಇನ್ನಷ್ಟು ಪಾರದರ್ಶಕವಾಗಿ ಮಾಡಲು ಉತ್ತೇಜನ ಸಿಗಬೇಕೆಂದು ಮಾಜಿ ಪಾಲಿಕೆ ಸದಸ್ಯ ಆರ್. ಪ್ರಕಾಶ್ ಒತ್ತಾಯಿಸಿದರು.