ಬೆಂಗಳೂರು: ಮೀನುಗಾರಿಕೆಯ ಉತ್ಪಾದನೆ, ಸಂಸ್ಕರಣೆ ಹಾಗೂ ರಫ್ತಿನ ಮೇಲೆ ಹೆಚ್ಚಿನ ಒತ್ತು ನೀಡಿ ಅದಕ್ಕೆ ತಕ್ಕಹಾಗೆ ಕಾರ್ಯಕ್ರಮಗಳನ್ನು ಹಾಗೂ ಹಣಕಾಸಿನ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಬ್ಬನ್ ಪಾರ್ಕ್ನಲ್ಲಿ ಸರ್ಕಾರಿ ಮತ್ಸಾಲಯದ ಆಧುನೀಕರಣ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಒಳನಾಡು ಮೀನುಗಾರಿಕೆಗೆ ಪ್ರತಿ ಗ್ರಾ.ಪಂ.ಗೆ ಒಂದು ಕೆರೆಯನ್ನು ಮೀಸಲಿಟ್ಟು ಅಲ್ಲಿನ ಆದಾಯವನ್ನು ಪಂಚಾಯತಿಯ ಕಾರ್ಯಕ್ರಮಗಳಿಗೆ ಬಳಕೆ ಮಾಡಲಾಗುವುದು. ಸುಮಾರು 2,500 ಪಂಚಾಯಿತಿಗಳಲ್ಲಿ ಮೀನುಗಾರಿಕೆ ಕೊಳಗಳನ್ನು ಇದೇ ವರ್ಷ ಪ್ರಾರಂಭಿಸಲಾಗುವುದು. ಸಮುದ್ರದಾಳದ ಮೀನುಗಾರಿಕೆಯಲ್ಲಿ ದೊಡ್ಡ ಬದಲಾವಣೆಯನ್ನು ತರಲಾಗುತ್ತಿದೆ.
ಎಂಟು ಮೀನುಗಾರಿಕೆ ಬಂದುರುಗಳ ಹೂಳು ತೆಗೆಸಿ ದೊಡ್ಡ ಸಾಮರ್ಥ್ಯದ ದೋಣಿಗಳು ಅಲ್ಲಿಗೆ ಬರುವಂತೆ ವ್ಯವಸ್ಥೆ ಮಾಡಿ, ಅವುಗಳ ನವೀಕರಣಕ್ಕಾಗಿ ಆಯವ್ಯಯದಲ್ಲಿ ಅನುದಾನ ಒದಗಿಸಲಾಗಿದೆ. ಸಮುದ್ರದಾಳದ ಮೀನುಗಾರಿಕೆಗೆ ವಿಶೇಷವಾದ 100 ಹೈಸ್ಪೀಡ್ ದೋಣಿಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಮಂಜೂರು ಮಾಡಲಾಗಿದೆ. ಇದಕ್ಕೆ 150 ಅರ್ಜಿಗಳು ಈಗಾಗಲೇ ಸ್ವೀಕೃತವಾಗಿವೆ. ಇದೇ ತಿಂಗಳು ಅವುಗಳಿಗೆ ಮಂಜೂರಾತಿ ನೀಡಲು ಇಲಾಖೆ ನಿದೇರ್ಶಕರಿಗೆ ಸೂಚಿಸಿದ್ದೇನೆ ಎಂದರು.
ಸಮುದ್ರದಾಳದ ಮೀನುಗಾರಿಕೆಯಲ್ಲಿ ದೊರೆತ ಮೀನುಗಳಿಗೆ ಸಂಸ್ಕರಣಾ ಘಟಕವನ್ನು ಸ್ಥಾಪಿಸಬಹುದು. ಕೆಲವು ದೊಡ್ಡ ಪ್ರಮಾಣದ ಸಂಸ್ಕರಣಾ ಘಟಕಗಳ ಮುಖ್ಯಸ್ಥರೊಂದಿಗೆ ಮಾತನಾಡಿದ್ದು, ಅತಿ ಹೆಚ್ಚು ರಫ್ತನ್ನು ಮೀನುಗಾರಿಕೆಯಲ್ಲಿ ಮುಂದಿನ ದಿನಗಳಲ್ಲಿ ಮಾಡಬೇಕಿದೆ ಎಂದರು. ಜೊತೆಗೆ ಒಳನಾಡು ಮೀನುಗಾರಿಕೆಗೆ ಮಹತ್ವ ನೀಡಿ, ಮೀನು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.