ಬೆಂಗಳೂರು:ಜನಪದ ಉತ್ತೇಜಿಸಲು ಅನುದಾನ ಹೆಚ್ಚಳ ಹಾಗೂ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಮಾದರಿ ನಾಲ್ಕು ಹೆಚ್ಚುವರಿ ರಂಗಮಂದಿರಗಳ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿಡಲು ಸಿಎಂ ಯಡಿಯೂರಪ್ಪ ಸಮ್ಮತಿಸಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ ಟಿ ರವಿ ತಿಳಿಸಿದರು.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಇಂದು ಜಾನಪದ ಲೋಕ ಬೆಳ್ಳಿಹಬ್ಬದ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ನಿನ್ನೆ ಸಿಎಂ ಅಧ್ಯಕ್ಷತೆಯಲ್ಲಿ ಸಾಹಿತಿ, ಕಲಾವಿದರು, ಸಾಂಸ್ಕೃತಿಕ ಲೋಕದ ದಿಗ್ಗಜರೊಂದಿಗೆ ಬಜೆಟ್ ಪೂರ್ವ ಸಭೆ ನಡೆಸಲಾಯಿತು. ಸುಧಾಮೂರ್ತಿಯವರ ಅಧ್ಯಕ್ಷತೆಯ ಪ್ರವಾಸೋದ್ಯಮ ಟಾಸ್ಕ್‌ಫೋರ್ಸ್ ನೀಡಿರುವ ವರದಿಯನ್ವಯ ಅನುದಾನ ಬಿಡುಗಡೆ ಮಾಡಲು ಸಿಎಂ ಒಪ್ಪಿದ್ದಾರೆ ಎಂದರು.
ಪ್ರವಾಸೋದ್ಯಮ ಇಲಾಖೆಗೆ ₹1,500 ಕೋಟಿ ಅನುದಾನಕ್ಕೆ ಬೇಡಿಕೆ ಇಟ್ಟಿದ್ದೇವೆ. ಕರ್ನಾಟಕ ದರ್ಶನ ಯೋಜನೆ ಸದ್ಯ ಎಸ್ಸಿ,ಎಸ್ಟಿ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತ. ಇದರಿಂದ ಮಕ್ಕಳ ಮನಸ್ಸಿನಲ್ಲಿ ಜಾತಿ ವಿಷಬೀಜ ಬಿತ್ತುವಂತಾಗುತ್ತಿದೆ. ಹೀಗಾಗಿ ಯೋಜನೆಯನ್ನು 8 ಮತ್ತು 9 ತರಗತಿಯ ಎಲ್ಲ ವಿದ್ಯಾರ್ಥಿಗಳಿಗೂ ವಿಸ್ತರಿಸಲು ಮನವಿ ಮಾಡಿದ್ದೇವೆ ಎಂದರು.