ಬೆಂಗಳೂರು:ಬಿಜೆಪಿ ಶಾಸಕನ ಪ್ರತಿಭಟನೆಗೆ ಮಣಿದ ಸರ್ಕಾರ ಕೊನೆಗೂ ಪ್ರವಾಹ ಪೀಡಿತ ತಾಲೂಕು ಪಟ್ಟಿಗೆ ಮೂಡಿಗೆರೆ ತಾಲೂಕನ್ನು ಸೇರ್ಪಡೆಗೊಳಿಸಿದೆ. ಕಳೆದ ವಾರ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಪ್ರವಾಹ ಪೀಡಿತ ತಾಲೂಕುಗಳ ಪಟ್ಟಿಗೆ ಮೂಡಿಗೆರೆ ತಾಲೂಕನ್ನು ಸೇರಿಸಿಲ್ಲ ಎಂದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದ್ದರು. ಆ ವೇಳೆ ಕಂದಾಯ ಸಚಿವ ಆರ್.ಅಶೋಕ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು.
ಇದೀಗ ಹೊಸದಾಗಿ 22 ಹೆಚ್ಚುವರಿ ತಾಲೂಕುಗಳನ್ನು ಪ್ರವಾಹ ಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಲಾಗಿದ್ದು, ಅದರಲ್ಲಿ ಮೂಡಿಗೆರೆ ತಾಲೂಕನ್ನು ಸೇರ್ಪಡೆಗೊಳಿಸಲಾಗಿದೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, 61 ತಾಲೂಕುಗಳು ಪ್ರವಾಹ ಪೀಡಿತವೆಂದು ಈ ಘೋಷಣೆ ಮಾಡಲಾಗಿತ್ತು. ಮಳೆ ಹೆಚ್ಚಾಗಿ ಮತ್ತೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ 22 ತಾಲೂಕು ಪ್ರವಾಹ ಪೀಡಿತವೆಂದು ಘೋಷಣೆ ಮಾಡಲಾಗಿದೆ ಎಂದರು.
ಬೆಳಗಾವಿ, ಚಿಕ್ಕಮಗಳೂರು, ಹೆಬ್ಬಳ್ಳಿ ನಗರ, ಕಡೂರು, ದಾವಣಗೆರೆ, ದಾಂಡೇಲಿ, ಆಲೂರು, ಲಕ್ಷ್ಮೇಶ್ವರ, ತರೀಕೆರೆ, ಮುಂಡಗೋಡು, ಸೂಪ, ಹುಬ್ಬಳ್ಳಿ, ಭದ್ರಾವತಿ, ಚೆನ್ನಗಿರಿ, ಅಣ್ಣಿಗೇರಿ, ಬಬಲೇಶ್ವರ, ನಿಡಗುಂದಿ, ಕೋಲ್ಹಾರ, ಮುದ್ದೆಬಿಹಾಳ, ಹರಪನಹಳ್ಳಿ, ಹೊಸನಗರ, ಮೂಡಿಗೆರೆ ತಾಲೂಕನ್ನು ಹೊಸದಾಗಿ ಪ್ರವಾಹ ಪೀಡಿತ ತಾಲೂಕು ಎಂದು ಘೋಷಿಸಲಾಗಿದೆ ಎಂದು ವಿವರಿಸಿದರು.