ಬೆಂಗಳೂರು:ದೇಶಕ್ಕೆ ಕರ್ನಾಟಕದ ಆರ್ಥಿಕ ಕೊಡುಗೆ ಹೆಚ್ಚಾಗಿದೆ.ರಾಜ್ಯದ ಜಿಎಸ್ಟಿ ಸಂಗ್ರಹ ಮೂರು ತಿಂಗಳಿನಿಂದ ಸತತವಾಗಿ 10 ಸಾವಿರ ಕೋಟಿ ರೂಪಾಯಿ ದಾಟಿದೆ ಎಂಬ ಮಾಹಿತಿಯನ್ನು ಮುಖ್ಯಮಂತ್ರಿ ಬಸವರಾಜ ಅವರು ಬೊಮ್ಮಾಯಿ ಟ್ವೀಟ್ ಮೂಲಕ ಹಂಚಿಕೊಂಡಿದ್ದು, ರಾಜ್ಯದ ತೆರಿಗೆ ಸಂಗ್ರಹದಲ್ಲಿನ ಪ್ರಗತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಕರ್ನಾಟಕದ ಮಾಸಿಕ ಜಿಎಸ್‌ಟಿ ಸಂಗ್ರಹವು ಸತತವಾಗಿ 3 ತಿಂಗಳುಗಳಿಂದ 10 ಸಾವಿರ ಕೋಟಿ ರೂಪಾಯಿಗಳನ್ನು ದಾಟಿದೆ.ಸದ್ಯ ನಾವು ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರಕ್ಕಿಂತ ಸ್ವಲ್ಪ ಹಿಂದೆ ಇದ್ದೇವೆ. ಇದು ನಮ್ಮ ರಾಜ್ಯದ ತೆರಿಗೆ ಸಂಗ್ರಹ ವಿಚಾರದಲ್ಲಿ ಸಕಾರಾತ್ಮಕ ಬೆಳವಣಿಗೆ. ನಾವು ಉತ್ತಮ ಬೆಳವಣಿಗೆಯ ಪಥದಲ್ಲಿದ್ದೇವೆ ಎನ್ನುವುದಕ್ಕೆ ನಿದರ್ಶನ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಇದ್ದ ಕೋವಿಡ್-ಪ್ರೇರಿತ ಮಂದಗತಿಯ ಋಣಾತ್ಮಕ ಪ್ರಭಾವವನ್ನು ಮೀರಿದ್ದೇವೆ ಎಂಬುದನ್ನು ನಮ್ಮ ಜಿಎಸ್‌ಟಿ ಸಂಗ್ರಹ ಕಳೆದ ಮೂರು ತಿಂಗಳಿನ ಸಂಗ್ರಹದ ಪ್ರಮಾಣವೇ ಸಾಬೀತುಪಡಿಸುತ್ತದೆ. ಅಧಿಕ ಜಿಎಸ್‌ಟಿ ಸಂಗ್ರಹದ ಮೂಲಕ ರಾಷ್ಟ್ರೀಯ ಆರ್ಥಿಕತೆಯನ್ನು ಉತ್ತೇಜಿಸುತ್ತಿರುವುದಕ್ಕೆ ನಮಗೆ ಹೆಮ್ಮೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಸವನ್ನು ಹಂಚಿಕೊಂಡಿದ್ದಾರೆ.
ಕೋವಿಡ್ ಬಳಿಕ ಜಿಎಸ್‍ಟಿ ಸಂಗ್ರಹ ಶೇ 30 ರಷ್ಟು ಹೆಚ್ಚಳ: ಕೋವಿಡ್ ಅವಧಿ ನಂತರ ರಾಜ್ಯದ ಜಿಎಸ್ಟಿ ಸಂಗ್ರಹ ಶೇ 30 ರಷ್ಟು ಹೆಚ್ಚಳವಾಗಿದೆ. 2022-23ನೇ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿಯನ್ನು ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದ್ದ ವರದಿಯಲ್ಲಿ ಇದು ಉಲ್ಲೇಖವಾಗಿದೆ. ಕೋವಿಡ್ ಅವಧಿಯಲ್ಲಿ (2021-22) ಕರ್ನಾಟಕ ರಾಜ್ಯದ ಜಿಎಸ್ಟಿ ಸಂಗ್ರಹ ಶೇ.10 ರಷ್ಟು ಹೆಚ್ಚಾಗಿತ್ತು. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 2022-23ರ ಪ್ರಥಮ ಅರ್ಧ ವಾರ್ಷಿಕದಲ್ಲಿ ಶೇ.30 ರಷ್ಟು ಜಿಎಸ್‍ಟಿ ಸಂಗ್ರಹ ಏರಿಕೆಯಾಗಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.