ಬೆಂಗಳೂರು: ನಗರದ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ವಿಶ್ವದ ಮೊದಲ 'ಮಾಂಟೆಸ್ಸರಿ ಸ್ಕೂಲ್ ಆನ್ ವ್ಹೀಲ್ಸ್' ಅನ್ನು ಪ್ರಾರಂಭಿಸಲಾಗಿದೆ. ಕೊಳಗೇರಿ ಮಕ್ಕಳಿಗಾಗಿ ಅಂಗನಾಡಿ ಶಿಕ್ಷಣವನ್ನು ಅವರ ಮನೆ ಬಾಗಿಲಿಗೆ ಕೊಂಡೊಯ್ಯುವುದು ಇದರ ಉದ್ದೇಶವಾಗಿದೆ.
ಅಂಗನವಾಡಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ ಫ್ರೀ ಥಿಂಕಿಂಗ್ ಫೌಂಡೇಶನ್ ಸಂಸ್ಥೆಯ ನೇತೃತ್ವದಲ್ಲಿ ಮನೆ ಬಾಗಿಲಿಗೆ ಶಾಲಾ ವಾಹನ ಯೋಜನೆಗೆ ಸೋಮವಾರ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಚಾಲನೆ ನೀಡಿದರು.
ಬೆಂಗಳೂರಲ್ಲಿ ವಿಶ್ವದ ಮೊದಲ ಮಾಂಟೆಸ್ಸರಿ ಸ್ಕೂಲ್ ಆನ್ ವ್ಹೀಲ್ಸ್ ಆರಂಭ ಮಾಂಟೆಸ್ಸರಿ ಸ್ಕೂಲ್ ಆನ್ ವ್ಹೀಲ್ಸ್: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪಾಲಿಕೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಭಾಗಿತ್ವದಲ್ಲಿ ವಂಡರ್ ಆನ್ ವೀಲ್ಸ್ (ಮನೆ ಬಾಗಿಲಿಗೆ ಶಾಲೆ) ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ತುಷಾರ್ ಗಿರಿನಾಥ್, ಬಿಬಿಎಂಪಿ ವತಿಯಿಂದ ಈಗಾಗಲೇ ಎಲ್ಲಾ ವಲಯಗಳಲ್ಲಿ 10 ಬಸ್ಗಳಲ್ಲಿ ಶಾಲೆಗಳಿಂದ ಹೊರಗುಳಿದ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಈಗ ಫ್ರೀ ಥಿಂಕಿಂಗ್ ಫೌಂಡೇಷನ್ ಸಂಸ್ಥೆ ಸಹಭಾಗಿತ್ವದಲ್ಲಿ ವಿಶ್ವದ ಮೊದಲ ಮಾಂಟೆಸ್ಸರಿ ಸ್ಕೂಲ್ ಆನ್ ವ್ಹೀಲ್ಸ್ ಅನ್ನು ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಪ್ರಾರಂಭಿಸಲಾಗಿದೆ ಎಂದರು.
ಮಾಂಟೆಸ್ಸರಿ ಸ್ಕೂಲ್ ಆನ್ ವ್ಹೀಲ್ಸ್ ಮನೆ ಬಾಗಿಲಿಗೆ ಶಿಕ್ಷಣ: ಮಕ್ಕಳಿಗೆ ಮಾಂಟೆಸ್ಸರಿ ವಿಧಾನದಲ್ಲಿ ಬೋಧನೆ ಮಾಡಲು ಶಿಕ್ಷಕರಿಗೆ ತರಬೇತಿ ಸಹ ನೀಡಲಾಗಿರುತ್ತದೆ. ಕೊಳೆಗೇರಿಗಳಲ್ಲಿ ವಾಸಿಸುವ 2.5 ರಿಂದ 6 ವರ್ಷ ವಯಸ್ಸಿನ ಮಕ್ಕಳ ಆರಂಭಿಕ ಕಲಿಕೆಯನ್ನು ಮನೆ ಬಾಗಿಲಿಗೆ ಕೊಂಡೊಯ್ಯುವುದು ಇದರ ಉದ್ದೇಶವಾಗಿದೆ. ವಾಹನದಲ್ಲಿ ಇಬ್ಬರು ಶಿಕ್ಷಕಿಯರು, ಓರ್ವ ಗ್ರೂಪ್ ಡಿ ನೌಕರ, ಬಿಳಿ ಹಲಗೆ (ವೈಟ್ ಬೋರ್ಡ್), ಮಕ್ಕಳ ಸ್ನೇಹಿ ಚಿತ್ರಗಳ ಅಳವಡಿಕೆ, ಕುಡಿಯುವ ನೀರು ಸೇರಿದಂತೆ ಇನ್ನಿತರ ಮೂಲಸೌಲಭ್ಯಗಳು ಇರಲಿವೆ ಎಂದು ಮಾಹಿತಿ ನೀಡಿದರು.
ಮಾಂಟೆಸ್ಸರಿ ಸ್ಕೂಲ್ ಆನ್ ವ್ಹೀಲ್ಸ್ ಈ ವೇಳೆ ಬಿಬಿಎಂಪಿ ವಿಶೇಷ ಆಯುಕ್ತರು (ಶಿಕ್ಷಣ) ಡಾ.ರಾಮ್ ಪ್ರಸಾತ್ ಮನೋಹರ್, ಪಾಲಿಕೆ ಶಿಕ್ಷಣ ವಿಭಾಗದ ಸಹಾಯಕ ಆಯುಕ್ತ ಉಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕಿ ಉಷಾ, ಫ್ರೀ ಥಿಂಕಿಂಗ್ ಫೌಂಡೇಶನ್ ಸಂಸ್ಥೆಯ ಮುಖ್ಯಸ್ಥ ಸುನೋಜ್ ಫಿಲಿಫ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
(ಇದನ್ನೂ ಓದಿ: ದಲಿತೆ ಎಂದು ಅನುಮತಿ ನೀಡದ ಗ್ರಾಮಸ್ಥರು: ಅಂಗನವಾಡಿಯನ್ನ ಕಾನ್ವೆಂಟ್ ರೀತಿ ಮಾಡಿ ಸವಾಲೆಸೆದ ಶಿಕ್ಷಕಿ!)