ಕರ್ನಾಟಕ

karnataka

ETV Bharat / state

Water levels in reservoirs: ಮುಂಗಾರು ಮಳೆ ವಿಳಂಬ; ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಇಳಿಕೆ - Monsoon delay impact

ರಾಜ್ಯದಲ್ಲಿ ಮುಂಗಾರು ಮಳೆ ಇನ್ನೂ ಆರಂಭವಾಗಿಲ್ಲ. ಒಂದು ವಾರದ ನಂತರ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ. ಮುಂಗಾರು ಪೂರ್ವದಲ್ಲಿ ಸರಿಯಾದ ಮಳೆಯಾಗದೇ ಇರುವುದರಿಂದ ಇದರ ನೇರ ಪರಿಣಾಮ ಜಲಾಶಯಗಳ ಮೇಲಾಗಿದೆ.

Monsoon
ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಇಳಿಕೆ

By

Published : Jun 8, 2023, 9:56 PM IST

ಬೆಂಗಳೂರು:ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಕಡಿಮೆಯಾಗಿದೆ. ಬಿಸಿಲ ತಾಪಕ್ಕೆ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ತುಂಗಭದ್ರಾ ಜಲಾಶಯವು ಬಹುತೇಕ ಖಾಲಿಯಾಗಿದೆ. ಇಲ್ಲಿನ ನೀರಿನ ಮಟ್ಟ ಡೆಡ್ ಸ್ಟೋರೇಜ್ ಹಂತ ತಲುಪಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಕೆಲವು ಜಿಲ್ಲೆಗಳಿಗೆ ಈ ಜಲಾಶಯದ ನೀರು ಅಗತ್ಯ. ರಾಜ್ಯದ ಹಲವು ಕಡೆ ಮಳೆಯಗುತ್ತಿದ್ದರೂ, ಈ ಭಾಗದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆ ಬಿದ್ದಿಲ್ಲ.

ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 105.79 ಟಿಎಂಸಿ ಇದೆ. ಸುಮಾರು 10 ಲಕ್ಷ ಹೆಕ್ಟೇರ್ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕಳೆದ ವರ್ಷ ಈ ಸಂದರ್ಭದಲ್ಲಿ 35 ಕ್ಕೂ ಹೆಚ್ಚು ಟಿಎಂಸಿ ನೀರು ಸಂಗ್ರಹವಾಗಿತ್ತು. ಜಲಾಶಯದಲ್ಲಿ ನೀರು ಸಂಗ್ರಹವಿಲ್ಲದೆ ಈ ಬಾರಿ ರೈತರಿಗೆ ಸಂಕಷ್ಟ ಎದುರಾಗುವ ಆತಂಕ ಕಾಡುತ್ತಿದೆ.

2023ರ ಜನವರಿಯಿಂದ ಮೇ 31ರವರೆಗೆ 129 ಮಿ.ಮೀ ಸಾಮಾನ್ಯ ಪೂರ್ವ ಮುಂಗಾರು ಮಳೆಯಾಗಬೇಕಿತ್ತು. ಆದರೆ, ರಾಜ್ಯದಲ್ಲಿ ಕೇವಲ 39.7 ಮಿ.ಮೀ ಮಳೆಯಾಗಿದೆ. ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ ಶೇ.3 ರಷ್ಟು ನೀರು ಸಂಗ್ರಹವಿದೆ. ಇನ್ನು ಕಾವೇರಿ ಜಲಾನಯನ ಪ್ರದೇಶಗಳ ಜಲಾಶಯಗಳಲ್ಲಿ 40.74 ಟಿಎಂಸಿ ನೀರು ಸಂಗ್ರಹವಾಗಿದ್ದು, ಕಳೆದ ವರ್ಷ ಇದೇ ವೇಳೆ 57.32 ಟಿಎಂಸಿ ನೀರು ಸಂಗ್ರಹವಾಗಿತ್ತು. ಕಷ್ಣಾ ಜಲಾನಯನ ಪ್ರದೇಶದಲ್ಲಿ ಕಳೆದ ವರ್ಷ 132.98 ಟಿಎಂಸಿ ನೀರು ಇತ್ತು. ಈ ಸಲ 99.09 ಟಿಎಂಸಿ ನೀರಿದೆ.

ಕೃಷ್ಣರಾಜಸಾಗರ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 124.80 ಅಡಿ ಇದ್ದು, ಪ್ರಸ್ತುತ 81.80 ಅಡಿ ನೀರಿನ ಮಟ್ಟ ತಲುಪಿದೆ. ಮಳೆ ಬಾರದಿದ್ದರೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಲಿದೆ. ಕಳೆದ ಐದು ವರ್ಷಗಳಿಂದ ಅಣೆಕಟ್ಟೆಯ ನೀರಿನ ಸಂಗ್ರಹದಲ್ಲಿ ಸುಧಾರಣೆ ಕಂಡು ಬಂದಿತ್ತು. ಆದರೆ, ಈ ವರ್ಷ ಅತಿ ಕಡಿಮೆ ಪ್ರಮಾಣದ ನೀರು ಸಂಗ್ರಹವಾಗಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಆತಂಕ ಎದುರಾಗಿದೆ.

ಬಿಸಿಲಿನ ಪ್ರಮಾಣ ಎಂದಿಗಿಂತ ಹೆಚ್ಚಿರುವುದು ಸಹ ಕೆಆರ್​ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಲು ಕಾರಣ ಎಂದು ಹೇಳಲಾಗುತ್ತಿದೆ. ಅಲ್ಲದೆ, ಕಾವೇರಿ ಕೊಳ್ಳದ ಭಾಗದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದಿರುವುದು ಆತಂಕ ಮೂಡಿಸಿದೆ. 2016ರಲ್ಲಿ ಕೆಆರ್​ಎಸ್ ಜಲಾಶಯವು ಡೆಡ್ ಸ್ಟೋರೆಜ್ ತಲುಪಿತ್ತು. 2017ರಲ್ಲಿ ಮುಂಗಾರು ಮಳೆ ಅಷ್ಟಾಗಿ ಬಾರದಿದ್ದರೂ ಹಿಂಗಾರು ಮಳೆ ಉತ್ತಮವಾಗಿ ಬಂದಿದ್ದರಿಂದ ಸಮಸ್ಯೆ ಉದ್ಭವಿಸಿರಲಿಲ್ಲ. ಇನ್ನು 2018 ರಲ್ಲೂ ರಾಜ್ಯದಲ್ಲಿ ಭಾರಿ ಮಳೆ ಸುರಿಯುವ ಮೂಲಕ ಪ್ರವಾಹವೇ ಸೃಷ್ಟಿಯಾಗಿತ್ತು. ಹಾಗಾಗಿ, ಜಲಾಶಯ ಭರ್ತಿಯಾಗಿತ್ತು. ಕಳೆದ ವರ್ಷ ಕೂಡ ನವೆಂಬರ್​ನಲ್ಲಿ ಜಲಾಶಯ ಭರ್ತಿಯಾಗಿತ್ತು.

ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ವರದಿ ಪ್ರಕಾರ, ಏಪ್ರಿಲ್ ಅಂತ್ಯದ ವೇಳೆಗೆ 13 ಜಲಾಶಯಗಳಲ್ಲಿ ನೀರಿನ ಮಟ್ಟ ಸರಾಸರಿ ಶೇ.27ರಷ್ಟು ಇದೆ. ಮುಂಗಾರು ಪೂರ್ವ ಮಳೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಇದರ ಮಧ್ಯೆ ಕೆಆರ್​ಎಸ್ ಜಲಾಶಯದಲ್ಲಿದ್ದ ನೀರನ್ನು ಬೇಸಿಗೆ ಬೆಳೆಗಳಿಗೆ ಹರಿಸಲಾಯಿತು. ಮುಂಗಾರು ಪೂರ್ವ ಮಳೆಯ ಕೊರತೆಯಿಂದ ಜಲಾಶಯದ ಸುತ್ತ ಮುತ್ತಲಿನ ಕೆರೆ ಕಟ್ಟೆಗಳಲ್ಲಿ ಅಲ್ಪಸ್ವಲ್ಪ ನೀರು ಮಾತ್ರ ಸಂಗ್ರಹವಾಗಿದೆ. ಈಗಾಗಲೇ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ಒಳಹರಿವಿಲ್ಲದೆ ಅಣೆಕಟ್ಟು ಸೊರಗಿದೆ. ಇದರ ಜೊತೆಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ಆದೇಶದಂತೆ ಜೂನ್ ತಿಂಗಳಲ್ಲಿ ತಮಿಳುನಾಡಿಗೆ ನೀರುಹರಿಸುವ ಪರಿಸ್ಥಿತಿ ಸೃಷ್ಟಿಯಾಗಲಿದೆ. ಆಗ ಮತ್ತಷ್ಟು ಸಮಸ್ಯೆ ಎದುರಾಗಲಿದೆ. ವಿದ್ಯುತ್ ಉತ್ಪಾದನೆಗೂ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಶರಾವತಿ ನದಿಪಾತ್ರದಲ್ಲಿ ಮಳೆಯಾಗದಿದ್ದರೆ ವಿದ್ಯುತ್ ಉತ್ಪಾದನೆ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.

ಜಲಾಶಯಗಳಲ್ಲಿ ನೀರಿನ ಮಟ್ಟ ಹೇಗಿದೆ?:ರಾಜ್ಯದ ಯಾವ ಜಲಾಶಯಗಳಲ್ಲಿ ನೀರಿನ ಮಟ್ಟ ಕಳೆದ ವರ್ಷ ಎಷ್ಟಿತ್ತು, ಈಗ ಎಷ್ಟಿದೆ ಎಂಬುದನ್ನು ನೋಡುವುದಾದರೆ, ಲಿಂಗನಮಕ್ಕಿ ಡ್ಯಾಂನ ಸಾಮರ್ಥ್ಯ 151 ಟಿಎಂಸಿ ಇದ್ದು, ಈಗ 15.44 ಟಿಎಂಸಿ ನೀರಿದೆ. 2022ರಲ್ಲಿ 22.02 ಟಿಎಂಸಿ ನೀರಿತ್ತು. ತುಂಗಭದ್ರಾ ಜಲಾಶಯದ ಸಾಮರ್ಥ್ಯ 105.79 ಟಿಎಂಸಿ ಇದ್ದು, ಈಗ 5.02 ಟಿಎಂಸಿ ನೀರಿದ್ದು, 2022 ರಲ್ಲಿ 39.48 ಟಿಎಂಸಿ ನೀರಿತ್ತು. ಹೇಮಾವತಿ ಜಲಾಶಯದ ನೀರಿನ ಸಾಮರ್ಥ್ಯ 37.10 ಟಿಎಂಸಿ ಇದ್ದು, ಈಗ 15.68 ಟಿಎಂಸಿ ನೀರಿದೆ. 2022ರಲ್ಲಿ 22.90 ಟಿಎಂಸಿ ಇದೆ. ಕಬಿನಿ ಜಲಾಶಯ ಸಾಮರ್ಥ್ಯ 19.52 ಟಿಎಂಸಿ ಇದ್ದು, ಈಗ 4.30 ಟಿಎಂಸಿ ನೀರಿದೆ. 2022 ರಲ್ಲಿ 8.15 ಟಿಎಂಸಿ ನೀರಿತ್ತು. ಆಲಮಟ್ಟಿ ನೀರಿನ ಸಾಮರ್ಥ್ಯ 123.08 ಟಿಎಂಸಿ ಇದೆ. ಈಗ 21.04 ಟಿಎಂಸಿ ನೀರಿದೆ. 2022ರಲ್ಲಿ 47.73 ಟಿಎಂಸಿ ನೀರಿತ್ತು. ಹಾರಂಗಿ ಡ್ಯಾಂ ಸಾಮರ್ಥ್ಯದ ನೀರಿನ ಮಟ್ಟ 8.50 ಟಿಎಂಸಿ ಇದೆ. ಈಗ 2.60 ಟಿಎಂಸಿ ನೀರಿದ್ದು, 2022ರಲ್ಲಿ 6.01 ಟಿಎಂಸಿ ನೀರು ಸಂಗ್ರಹವಾಗಿತ್ತು. ನಾರಾಯಣಪುರ ಡ್ಯಾಂ ಸಾಮರ್ಥ್ಯ 33.31 ಟಿಎಂಸಿ ಇದ್ದು, ಈಗ 15.51 ಟಿಎಂಸಿ ನೀರಿದೆ. 2022ರಲ್ಲಿ 26.31 ಟಿಎಂಸಿ ನೀರಿತ್ತು. ಇನ್ನು ಭದ್ರಾ ಜಲಾಯಶದ ಸಾಮರ್ಥ್ಯ 71.54 ಟಿಎಂಸಿ ಇದ್ದು, ಈಗ 25.18 ಟಿಎಂಸಿ ನೀರಿದೆ. 2022ರಲ್ಲಿ 34.78 ಟಿಎಂಸಿ ನೀರಿತ್ತು.

ಕರಾವಳಿ ಭಾಗದಲ್ಲೂ ಮಳೆ ಕೊರತೆ:ಈ ಬಾರಿ ಮಳೆ ವಿಳಂಬದಿಂದ ಮಂಗಳೂರು ನಗರದಲ್ಲಿ ಕುಡಿಯುವ ನೀರಿಗೆ ಸಂಕಷ್ಟ ತಲೆದೋರಿದೆ. ಇದರಿಂದ ಜನತೆ ಭಾರೀ ತೊಂದರೆಗೊಳಗಾಗಿದ್ದಾರೆ‌. ಮಂಗಳೂರಿಗೆ ನೀರು ಸರಬರಾಜು ಮಾಡುವ ತುಂಬೆ ಜಲಾಶಯದಲ್ಲಿ ನೀರು ಖಾಲಿಯಾಗಿದೆ. ಅಡ್ಯಾರ್ ಜಲಾಶಯದಲ್ಲಿ ಸಂಗ್ರಹವಾದ ನೀರನ್ನು ಪಂಪ್ ಮಾಡಿ ತುಂಬೆ ಡ್ಯಾಂಗೆ ನೀರು ಬಿಡಾಲಾಗಿದೆ. ತುಂಬೆ ಜಲಾಶಯದಿಂದ ಮಂಗಳೂರಿಗೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಇನ್ನೂ ಎಎಂಆರ್ ಡ್ಯಾಂನಿಂದ ಈಗಾಗಲೇ ನೀರು ಬಿಡಲಾಗಿದ್ದು, ಆ ನೀರು ತುಂಬೆ ಜಲಾಶಯಕ್ಕೆ ಬಂದು ಸೇರಿದೆ.

ಇದನ್ನೂ ಓದಿ:ಕೇರಳಕ್ಕೆ ಅಪ್ಪಳಿಸಿದ ಮುಂಗಾರು.. 48 ಗಂಟೆಯಲ್ಲಿ ಕರ್ನಾಟಕಕ್ಕೆ ಮಾನ್ಸೂನ್​ ಪ್ರವೇಶ

ABOUT THE AUTHOR

...view details