ಬೆಂಗಳೂರು: ಜುಲೈ ತಿಂಗಳ ಮೊದಲ ವಾರದಿಂದ ರಾಜ್ಯದಲ್ಲಿ ಎಡೆಬಿಡದೆ ಸುರಿಯುತ್ತಿದ್ದ ಮುಂಗಾರು ಮಳೆ ಕೊನೆಗೂ ಬಿಡುವು ಕೊಟ್ಟಿದೆ. ಮುಂದಿನ 4 ದಿನ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮಂಗಳವಾರ ಹಲವೆಡೆ ಚದುರಿದಂತೆ ಸಾಧಾರಣ ಮಳೆಯಾಗಿದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಜುಲೈ 1ರಿಂದ ಜುಲೈ 19ರವರೆಗೆ ರಾಜ್ಯಾದ್ಯಂತ 365 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 462 ಮಿ.ಮೀ. ಮಳೆಯಾಗಿದೆ. ವಾಡಿಕೆಗಿಂತ ಶೇ.27ರಷ್ಟು ಹೆಚ್ಚು ಮಳೆ ಬಿದ್ದಿದೆ. ದಕ್ಷಿಣ ಒಳನಾಡಿನಲ್ಲಿ ಶೇ.76, ಉತ್ತರ ಒಳನಾಡಿನಲ್ಲಿ ಶೇ.21, ಮಲೆನಾಡಿನಲ್ಲಿ ಶೇ.25 ಹಾಗೂ ಕರಾವಳಿಯಲ್ಲಿ ಶೇ.21 ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ ಎಂದು ಇಲಾಖೆ ತಿಳಿಸಿದೆ.