ಬೆಂಗಳೂರು: ಕರ್ನಾಟಕ ರಾಜ್ಯ ಕೃಷಿ ಮಂಡಳಿಯ ವಂಚನೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿಜಯ್ ಆಕಾಶ್, ಪ್ರೇಮ್ ರಾಜ್, ದಿನೇಶ್ ಬಂಧಿತ ಆರೋಪಿಗಳು. ಕರ್ನಾಟಕ ರಾಜ್ಯ ರೈತರಿಗೆ ಮಾರುಕಟ್ಟೆಯಲ್ಲಿ ಕೃಷಿ ಉತ್ಪಾದನೆಗಳ ದರಗಳಲ್ಲಿ ರೈತರಿಗೆ ನಷ್ಟವಾದ ಸಂದರ್ಭದಲ್ಲಿ ಸರ್ಕಾರದಿಂದ ಬೆಂಬಲ ಬೆಲೆ ಒದಗಿಸಲು ಆವರ್ತ ನಿಧಿ(ರಿವಾಲ್ವಿಂಗ್ ಫಂಡ್) ಹಣವನ್ನ ಇಡಲಾಗಿತ್ತು.
2019ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯಲ್ಲಿ 100 ಕೋಟಿ ಹಣವನ್ನು ಸಿಂಡಿಕೇಟ್ ಬ್ಯಾಂಕ್ ಉತ್ತರಹಳ್ಳಿ ಶಾಖೆಗೆ ಒಂದು ವರ್ಷದ ಅವಧಿಗೆ 6℅ರಂತೆ ನಿಶ್ಚಿತ ಠೇವಣಿ ವರ್ಗಾವಣೆ ಮಾಡಲಾಗಿತ್ತು. ಆದರೆ ಇದೇ ಸಂಧರ್ಭದಲ್ಲಿ 50 ಕೋಟಿ ಹಣವನ್ನು ನಕಲಿ ಅಧಿಕಾರಿಯ ಹೆಸರಿನಲ್ಲಿ ಠೇವಣಿ ಇಟ್ಟು ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್, ಮಂಡಳಿಯ ಡಿಜಿಎಂ ಮತ್ತಿತ್ತರರು ಶಾಮೀಲಾಗಿ ದೋಖಾ ಮಾಡಿದ್ದರು ಎನ್ನಲಾಗಿದೆ.
ಈ ವಿಚಾರ ಗೊತ್ತಾಗಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದಾಗಿನಿಂದ ಆರೋಪಿಗಳು ತಲೆಮರೆಸಿಕೊಂಡಿದ್ದರು. ಈ ಪ್ರಕರಣವನ್ನ ಸ್ವಯಂ ಪ್ರೇರಿತವಾಗಿ ಸಿಸಿಬಿ ತನಿಖೆ ನಡೆಸಲು ಮುಂದಾಗಿ ಪ್ರಕರಣ ವರ್ಗಾಯಿಸಿಕೊಂಡಿತ್ತು. ಪ್ರಾಥಮಿಕವಾಗಿ ಒಟ್ಟು 15 ಜನ ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದ ಸಿಸಿಬಿ, ಸದ್ಯ ಪ್ರಕರಣದ ಪ್ರಮುಖ ಆರೋಪಿ ವಿಜಯ್ ಆಕಾಶ್ಗಾಗಿ ಹುಡುಕಾಟ ನಡೆಸಿ ಚೆನ್ನೈನಲ್ಲಿ ಬಂಧಿಸಿದೆ.
ಸದ್ಯ ಆರೋಪಿಗಳ ಮೇಲೆ ಸಿಸಿಬಿ ಪೊಲೀಸರು ಪ್ರಾಥಮಿಕ ಚಾರ್ಜ್ಶೀಟ್ ಹಾಕಿದ್ದಾರೆ. ಮುಖ್ಯ ಆರೋಪಿ ವಿಜಯ್ ಆಕಾಶ್ ವಿರುದ್ಧ ಹೈದರಾಬಾದ್, ತಿರುಪತಿ, ಕೊಯಮತ್ತೂರಿನಲ್ಲಿ ಕೇಸ್ ದಾಖಲಾಗಿವೆ.