ಬೆಂಗಳೂರು: ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತರ ಜಗದೀಶ್ ಎಂಬುವರ ಬ್ಯಾಗ್ನಲ್ಲಿ ದೊರೆತ ದಾಖಲಾತಿ ಇಲ್ಲದ 10.50 ಲಕ್ಷ ಹಣ ಪತ್ತೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ವಿಧಾನಸೌಧ ಪೊಲೀಸರು ತನಿಖೆಗೆ ಸಹಕರಿಸದ ಆರೋಪದಡಿ ಸರ್ಕಾರಿ ನೌಕರನನ್ನು ಬಂಧಿಸಿದ್ದಾರೆ.
ಮಂಡ್ಯ ಮೂಲದ ಜಗದೀಶ್, ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು ಬುಧವಾರ ತಮ್ಮ ಕಾರಿನ ಮುಖಾಂತರ ಹಣವಿರುವ ಬ್ಯಾಗ್ ಸಮೇತ ವಿಕಾಸಸೌಧಕ್ಕೆ ಬಂದಿದ್ದರು. ವೆಸ್ಟ್ ಗೇಟ್ ಬಳಿ ಇವರನ್ನು ತಡೆದು ಭದ್ರತಾ ಸಿಬ್ಬಂದಿ ಪರಿಶೀಲಿಸಿದಾಗ ದಾಖಲಾತಿವಿಲ್ಲದ 10.50 ಲಕ್ಷ ಹಣ ಪತ್ತೆಯಾಗಿತ್ತು. ಹಣದ ಮೂಲದ ಬಗ್ಗೆ ನಿಖರ ಮಾಹಿತಿ ನೀಡದ ಕಾರಣ ವಿಕಾಸಸೌಧ ಭದ್ರತಾ ವಿಭಾಗದ ಸಿಬ್ಬಂದಿ ವಿಧಾನಸೌಧ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಇಂದು ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಿದ್ದರು.
ಪೊಲೀಸರ ಸೂಚನೆಯಂತೆ ವಕೀಲರೊಂದಿಗೆ ಠಾಣೆಗೆ ಬಂದು ಹಾಜರಾಗಿದ್ದ ಜಗದೀಶ್ ಅವರನ್ನು ಮೂರು ಗಂಟೆಗಳ ಕಾಲ ಪೊಲೀಸರು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಹಣದ ಮೂಲದ ಯಾವುದೇ ಸಮಂಜಸವಾದ ಉತ್ತರ ನೀಡಿಲ್ಲ. ಯಾವುದೇ ದಾಖಲಾತಿ ಒದಗಿಸಿಲ್ಲ. ಯಾರಿಗೆ ಹಣ ಕೊಡಬೇಕು? ಎಲ್ಲಿಂದ ಹಣ ಬಂದಿದೆ ಎಂಬುದರ ಬಗ್ಗೆ ಅನುಮಾನಾಸ್ಪದವಾಗಿ ಹೇಳಿಕೆ ನೀಡಿದ್ದಾರೆ. ಪೊಲೀಸರ ತನಿಖೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ 98, ಸಿಆರ್ ಪಿಸಿ ಕಾಯ್ದೆ 41 ಡಿ ಹಾಗೂ 102ರಡಿ ಬಂಧಿಸಲಾಗಿದೆ. ಶುಕ್ರವಾರ ಕೋರ್ಟ್ ಗೆ ಹಾಜರುಪಡಿಸಿ ಪೊಲೀಸ್ ಕಸ್ಟಡಿ ಪಡೆದು ವಿಚಾರಣೆ ಮುಂದುವರೆಸಲಾಗುವುದು ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ ಅವರು ತಿಳಿಸಿದ್ದಾರೆ.
ಬುಧವಾರ ಸಂಜೆ ಆಗಿದ್ದೇನು?: ಆರೋಪಿ ಜಗದೀಶ್ ಅವರನ್ನು ಬುಧವಾರ ವಿಧಾನಸೌಧ ಬಳಿ ಭದ್ರತಾ ತಪಾಸಣೆ ನಡೆಸಿದಾಗ ಅವರು ತಂದಿದ್ದ ಬ್ಯಾಗ್ ಪರಿಶೀಲನೆ ವೇಳೆ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿತ್ತು. ಈ ಬಗ್ಗೆ ಜಗದೀಶ್ ಅವರನ್ನು ಪ್ರಶ್ನಿಸಿದ ಪೊಲೀಸರಿಗೆ ಸಮಂಜಸವಾದ ಉತ್ತರ ನೀಡಿಲ್ಲ. ಅಲ್ಲದೆ ಸೂಕ್ತ ದಾಖಲಾತಿ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಸಿಬ್ಬಂದಿ ವಿಧಾನಸೌಧ ಪೊಲೀಸರಿಗೆ ಮಾಹಿತಿ ನೀಡಿದ್ದರು.