ಕರ್ನಾಟಕ

karnataka

ETV Bharat / state

ಬಾಕಿ ಉಳಿದ 5 ಕೆಜಿ ಅಕ್ಕಿಯ ಕಥೆ ಏನು?: ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿ ಪ್ರಶ್ನೆ

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಪ್ರತಿ ತಿಂಗಳು 5 ಕೆಜಿ ಉಚಿತ ಅಕ್ಕಿ ನೀಡುತ್ತಿರುವ ಸತ್ಯ ಒಪ್ಪಿಕೊಳ್ಳಲು ಸಿದ್ದರಾಮಯ್ಯರ ಎಟಿಎಂ ಸರ್ಕಾರಕ್ಕೆ ಇಷ್ಟು ದಿನ ಬೇಕಾಯಿತು ಎಂದು ಬಿಜೆಪಿ ಟ್ವೀಟ್ ಮಾಡಿದೆ.

Bjp
ಭಾರತೀಯ ಜನತಾ ಪಕ್ಷ

By

Published : Jun 30, 2023, 9:48 PM IST

ಬೆಂಗಳೂರು:ರಾಜ್ಯದಲ್ಲಿನ ಸಿದ್ದರಾಮಯ್ಯ ನೇತೃತ್ವದ ಎಟಿಎಂ ಸರ್ಕಾರ ಕಡೆಗೂ ಐದು ಕೆಜಿ ಅಕ್ಕಿ ಕೇಂದ್ರ ಕೊಡುತ್ತಿದೆ ಎಂದು ಒಪ್ಪಿಕೊಂಡಿದೆ. ಕೇಂದ್ರದ ಐದು ಕೆಜಿ ಅಕ್ಕಿ ಜೊತೆ ನೀವು ಈಗ ಐದು ಕೆಜಿ ಅಕ್ಕಿಯ ಬದಲು ಹಣ ಕೊಡುವುದಾಗಿ ಹೇಳಿದ್ದೀರಿ. ಆದರೆ ಬಾಕಿ ಐದು ಕೆಜಿ ಅಕ್ಕಿಯ ಕಥೆ ಏನು ಎಂದು ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಪ್ರಶ್ನಿಸಿದೆ.

ಅಕ್ಕಿ ಹೊಂದಿಸಲು ಕೈಲಾಗದ ಮುಖ್ಯಮಂತ್ರಿಗಳು ಎಂದಿನಂತೆ ತಮ್ಮ ತಪ್ಪನ್ನು ಬೇರೆಯವರ ಮೇಲೆ ಹಾಕಿ "ಕೈ" ತೊಳೆದುಕೊಳ್ಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಪ್ರತಿ ತಿಂಗಳು ಉಚಿತವಾಗಿ 5 ಕೆಜಿ ಅಕ್ಕಿಯನ್ನು ನೀಡುತ್ತಿರುವ ಸತ್ಯವನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಸಿದ್ದರಾಮಯ್ಯರ ಎಟಿಎಂ ಸರ್ಕಾರಕ್ಕೆ ಇಷ್ಟು ದಿನ ಬೇಕಾಯಿತು ಎಂದು ಟ್ವೀಟ್ ಮೂಲಕ ಟಾಂಗ್ ನೀಡಿದೆ.

ಸ್ವಯಂಘೋಷಿತ ಆರ್ಥಿಕ ತಜ್ಞ ಸಿದ್ದರಾಮಯ್ಯರವರೇ, ರಾಜ್ಯದ ಎಲ್ಲ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡುತ್ತೇವೆಂದು ನೀವುಗಳೇ ಹೋದಲ್ಲಿ, ಬಂದಲ್ಲಿ ಭಾಷಣ ಮಾಡುತ್ತಿದ್ದೀರಿ. ಈಗಾಗಲೇ ಕೇಂದ್ರ ಸರ್ಕಾರದ ವತಿಯಿಂದ 5 ಕೆಜಿ ದೊರೆಯುತ್ತಿದೆ ಎಂದರೆ, ನಿಮ್ಮ ಮಾತಿನ ಪ್ರಕಾರ, ರಾಜ್ಯದ ಜನತೆಗೆ ಕೇಂದ್ರ ಸರ್ಕಾರದ 5 ಹಾಗೂ ರಾಜ್ಯ ಸರ್ಕಾರದ ವತಿಯಿಂದ 10, ಒಟ್ಟು 15 ಕೆಜಿ ಅಕ್ಕಿ ದೊರೆಯಬೇಕು. ಆದರೆ ಈಗ ರಾಜ್ಯ ಸರ್ಕಾರದ ವತಿಯಿಂದ ಕೇವಲ 5 ಕೆಜಿ ಅಕ್ಕಿಯ ಬದಲಿಗೆ, ಪ್ರತಿ ಕೆಜಿಗೆ 34 ರೂಪಾಯಿ ನೀಡುವುದಾಗಿ ಘೋಷಿಸಿದ್ದೀರಿ. ಹಾಗಾದರೆ ಬಾಕಿ 5 ಕೆಜಿ ಅಕ್ಕಿಯ ಕಥೆ ಏನು? ಎಂದು ಪ್ರಶ್ನಿಸಿದೆ.

5 ಕೆಜಿಯ ಬಾಬ್ತು + 5 ಕೆಜಿ ಕೇಂದ್ರ ನೀಡುವ ಉಚಿತ ಅಕ್ಕಿ = 15 ಕೆಜಿ ಎಂದು ಜನರಿಗೆ ವಂಚಿಸುತ್ತಿದ್ದೀರಿ. ಜನರನ್ನು ನಂಬಿಸಿ ಮೋಸ ಮಾಡುವುದು, ಕಾಂಗ್ರೆಸ್ ಪಕ್ಷದ ಡಿಎನ್ಎಯಲ್ಲಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದೀರಿ. ನಿಮ್ಮ ಅಸಮರ್ಥ ಹಾಗೂ ಉಡಾಫೆ ಶೈಲಿಯ ಆಡಳಿತಕ್ಕೆ ಎಲ್ಲಿಯೂ ಸಹ ಅಕ್ಕಿ ದೊರೆತಿಲ್ಲ. ಈ ಕಾರಣಕ್ಕಾಗಿ ಜನತೆಗೆ ಅಕ್ಕಿ ಬದಲು ಹಣ ನೀಡಿ ಎಂದಾಗ, ಹಣವನ್ನು ತಿನ್ನುವುದಕ್ಕೆ ಆಗುತ್ತಾ ಎಂದು ಉದ್ಧಟತನ ಪ್ರದರ್ಶಿಸಿದ್ದೀರಿ, ಈಗ ಕೆಜಿಗೆ 34 ರೂಪಾಯಿ ಎಂದು ಯೂ ಟರ್ನ್ ಹೊಡೆದಿದ್ದೀರಿ ಎಂದು ಟೀಕಿಸಿದೆ.

ಕೇಂದ್ರದ ಸಬ್ಸಿಡಿ ಇಲ್ಲದೇ ತಾವು ನಿಗದಿಪಡಿಸಿರುವ ಮೊತ್ತಕ್ಕೆ ಊಟಕ್ಕೆ ಯೋಗ್ಯವಾದ ಅಕ್ಕಿ ಕರ್ನಾಟಕದ ಯಾವ ಗಿರಣಿಯಲ್ಲಿ ಸಿಗುತ್ತದೆ ಎಂಬ ಮಾಹಿತಿಯನ್ನೂ ಸ್ವಲ್ಪ ಜನತೆಗೆ ತಿಳಿಸಿ. ಇಲ್ಲವಾದಲ್ಲಿ ಮಾರುಕಟ್ಟೆಯಲ್ಲಿ ಯಾವ ದರದಲ್ಲಿ ಯೋಗ್ಯ ಅಕ್ಕಿ ದೊರೆಯುತ್ತದೆಯೋ ಅದೇ ದರವನ್ನು ನೀವು ಜನತೆಗೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.

13 ಬಜೆಟ್ ಮಂಡಿಸಿದ್ದೇನೆ, ಆಡಳಿತದಲ್ಲಿ ಅಪಾರವಾದ ಅನುಭವವಿದೆ ಎಂದು ಬಡಾಯಿ ಕೊಚ್ಚಿಕೊಳ್ಳುವ ನಿಮಗೆ, ಎಫ್​ಸಿಐ ಯನ್ನು ಸರ್ಕಾರ ಏಕೆ ಸ್ಥಾಪಿಸಿದೆ, ಅದರ ಧ್ಯೇಯೋದ್ದೇಶಗಳೇನು ಎಂಬುದು ತಿಳಿದಿಲ್ಲವಾದದ್ದು ಅತ್ಯಂತ ದುರದೃಷ್ಟಕರ. ನಿಮ್ಮ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರವನ್ನು ವಿನಾಕಾರಣ ದೂಷಿಸುವ ನಿಮ್ಮ ಬುದ್ಧಿಗೆ, ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿ ಎಚ್ಚರಿಕೆ ನೀಡಿದೆ.

ಇದನ್ನೂಓದಿ:Annabhagya Scheme: ನಾಳೆಯಿಂದಲೇ ಅನ್ನಭಾಗ್ಯದ ಹಣ ಫಲಾನುಭವಿಗಳ ಖಾತೆಗೆ ಜಮೆ... ಸಚಿವ ಕೆ ಹೆಚ್ ಮುನಿಯಪ್ಪ

ABOUT THE AUTHOR

...view details