ಬೆಂಗಳೂರು:ಇದು ಬೀಟ್ ಪೊಲೀಸರ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿ. ಮಧ್ಯರಾತ್ರಿ ಕಂಠ ಪೂರ್ತಿ ಕುಡಿದು ತೂರಾಡ್ತಿದ್ದವನನ್ನು ಹಿಡಿದು ವಿಚಾರಿಸಿದಾಗ ದಾಖಲೆಯಿಲ್ಲದ ಲಕ್ಷಗಟ್ಟಲೆ ಹಣ, ಕೆಜಿಗಟ್ಟಲೇ ಚಿನ್ನಾಭರಣ ಪತ್ತೆಯಾಗಿದೆ. ಇದನ್ನು ಪೊಲೀಸರೇ ಒಂದು ಕ್ಷಣ ಬೆರಗಾಗಿದ್ದಾರೆ.
ಪೊಲೀಸರಲ್ಲಿ ಸಣ್ಣ ಅನುಮಾನ, ತನಿಖಾ ಬುದ್ಧಿ ಚುರುಕಾಗಿದ್ದರೆ ಯಾವುದೇ ಅಪರಾಧವನ್ನು ಪತ್ತೆ ಹಚ್ಚಬಹುದು ಅನ್ನೋದಕ್ಕೆ ಇದೇ ನಿದರ್ಶನ. ಮಧ್ಯರಾತ್ರಿ ರಸ್ತೆಯಲ್ಲಿ ತೂರಾಡುತ್ತಿದ್ದವನನ್ನ ಅನುಮಾನದಲ್ಲಿ ಹಿಡಿದು ಪ್ರಶ್ನಿಸಿದಾಗ ಬರೋಬ್ಬರಿ ಒಂದು ಮುಕ್ಕಾಲು ಕೆ.ಜಿ. ಚಿನ್ನ, 22 ಲಕ್ಷ ರೂಪಾಯಿ ಹಣ ಪತ್ತೆಯಾದ ಘಟನೆ ನವೆಂಬರ್ 26ರ ರಾತ್ರಿ ಎಸ್.ಜೆ.ಪಾರ್ಕ್ ವ್ಯಾಪ್ತಿಯ ಎಸ್.ಪಿ.ರಸ್ತೆಯಲ್ಲಿ ನಡೆದಿದೆ. ಎರಡು ಬ್ಯಾಗ್ಗಳಲ್ಲಿ ಪತ್ತೆಯಾದ ಆಭರಣ ಕಂಡು ಪೊಲೀಸರೇ ದಂಗಾಗಿದ್ದರು. ಈ ವೇಳೆ ಆರೋಪಿ ವಿನೋದ್ ಕುಮಾರ್ನನ್ನು ಬಂಧಿಸಿದ್ದಾರೆ.
ಕುಡುಕನ ಬಳಿ ಪತ್ತೆಯಾಯ್ತು ಹಣ ಚಿನ್ನಾಭರಣ ಭಾನುವಾರ ಮಧ್ಯರಾತ್ರಿ ಬ್ಯಾಗ್ಗಳನ್ನ ಹಿಡಿದು ತೂರಾಡುತ್ತಿದ್ದಾಗ ಹಿಂಬಾಲಿಸಿದ್ದ ಎಸ್.ಜೆ. ಪಾರ್ಕ್ ಪೊಲೀಸ್ ಸಿಬ್ಬಂದಿ ಆರೋಪಿಯನ್ನು ಹಿಡಿಯಲು ಮುಂದಾಗಿದ್ದರು. ಈ ವೇಳೆ ಆರೋಪಿ ವಿನೋದ್ ಕುಮಾರ್ ಎಸ್ಕೇಪ್ ಆಗಲು ಯತ್ನಿಸಿದ್ದ. ಅನುಮಾನಗೊಂಡ ಪೊಲೀಸರು ಆರೋಪಿಯನ್ನು ಬೆನ್ನಟ್ಟಿ ವಶಕ್ಕೆ ಪಡೆದಾಗ ಆತನ ಬ್ಯಾಗಿನಲ್ಲಿ ಹಣ ಮತ್ತು ಚಿನ್ನಾಭರಣ ಪತ್ತೆಯಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಪತ್ತೆಯಾದ ಚಿನ್ನಾಭರಣ ಮತ್ತು ಹಣ ಚೆನ್ನೈನ ಪ್ರತಿಷ್ಠಿತ ಜ್ಯುವೆಲ್ಲರಿಗೆ ಸೇರಿದ್ದು ಎಂಬುದು ಬೆಳಕಿಗೆ ಬಂದಿದೆ. ಆದರೇ ಆರೋಪಿಗೆ ಕೊಟ್ಟಿದ್ದು ಯಾರು, ಎಲ್ಲಿಗೆ ಕೊಂಡೊಯ್ಯುತ್ತಿದ್ದ ಅನ್ನೋದನ್ನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದುವರೆಗೂ ಯಾರೂ ಸಹ ಚಿನ್ನಾಭರಣ, ಹಣವನ್ನು ತಮ್ಮದು ಎಂದು ಕ್ಲೈಮ್ ಮಾಡದೇ ಇರೋದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದ್ದು, ಸದ್ಯ ಸೂಕ್ತ ದಾಖಲೆಗಳಿಲ್ಲದೇ ಆರೋಪಿ ಭಾರಿ ಪ್ರಮಾಣದ ಹಣ, ಚಿನ್ನಾಭರಣ ಸಾಗಿಸಿರುವುದರಿಂದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:20 ಸೆಕೆಂಡ್ನಲ್ಲಿ 10 ಲಕ್ಷ ರೂ ಮೌಲ್ಯದ ನೆಕ್ಲೇಸ್ ಕದ್ದ ಮಹಿಳೆ: ವಿಡಿಯೋ