ಬೆಂಗಳೂರು: ಭಾರತದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಕರ್ನಾಟಕ ರಾಜ್ಯ ಸರ್ಕಾರ 1 ಟ್ರಿಲಿಯನ್ ಡಾಲರ್ ಕೊಡುಗೆ ನೀಡುವ ಗುರಿ ಹೊಂದಿದೆ. ಹೀಗಾಗಿ, ಸರ್ಕಾರದ ಮುಖ್ಯಕಾರ್ಯದರ್ಶಿ, ಯೋಜನಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಮೋಹನ್ ದಾಸ್ ಪೈ, ಎಫ್ಐಸಿಸಿಐ ಮತ್ತು ಮೆಕೆನ್ಸಿಯ ಪ್ರತಿನಿಧಿಗಳನ್ನು ಒಳಗೊಂಡ ಗುಂಪನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಯೋಜನಾ ಇಲಾಖೆಯ ಕರ್ನಾಟಕ ಆರ್ಥಿಕ ಸಮೀಕ್ಷೆ 2021-22 ರ ಆಧಾರದ ಮೇಲೆ ಹೆಚ್ಚಿನ ವಿಶ್ಲೇಷಣೆಯೊಂದಿಗೆ ಮೋಹನ್ ದಾಸ್ ಪೈ ಮತ್ತು ನಿಶಾ ಹೊಳ್ಳ ಅವರು ರಚಿಸಿರುವ 'Karnataka: A $1 Trillion GDP Vision' ಎಂಬ ವರದಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು, 2025ರ ವೇಳೆಗೆ 1 ಟ್ರಿಲಿಯನ್ ಯುಎಸ್ ಡಾಲರ್ ಆರ್ಥಿಕತೆಯನ್ನು ಸಾಧಿಸುವ ಗುರಿಯೊಂದಿಗೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವುದು, ಮೇಲ್ವಿಚಾರಣೆ ಮಾಡುವುದು ಮತ್ತು ಮೌಲ್ಯಮಾಪನವನ್ನು ಈ ಗುಂಪು ಮಾಡಲಿದೆ. ಈ ಕ್ರಿಯಾ ಯೋಜನೆಯ ಪ್ರಗತಿಯ ಮೇಲ್ವಿಚಾರಣೆಯನ್ನು ಇದರ ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:ತುಳಿತಕ್ಕೊಳಗಾದವರಿಗೆ ನ್ಯಾಯ ಕೊಡುವ ಕೆಲಸ.. ಮತ್ತೆ ಮೀಸಲಾತಿ ಹೆಚ್ಚಳದ ಸುಳಿವು ನೀಡಿದ್ರಾ ಸಿಎಂ?
ಫಲಿತಾಂಶ ಆಧಾರಿತ ಹಾಗೂ ಉದ್ದೇಶಿತ ಬಜೆಟ್ಗೆ ಅನುಕೂಲವಾಗುವಂತೆ ಡಿಸೆಂಬರ್ 2022 ರೊಳಗೆ ಕ್ರಿಯಾ ಯೋಜನೆ ಸಿದ್ಧವಾಗಲಿದೆ. ಕರ್ನಾಟಕದಿಂದ ಒಂದು ಟ್ರಿಲಿಯನ್ ಯುಎಸ್ಡಿ ಕೊಡುಗೆಯೊಂದಿಗೆ 5 ಟ್ರಿಲಿಯನ್ ಭಾರತದ ಗುರಿಯನ್ನ ನಾವು ಹೊಂದಿಕೊಳ್ಳಬೇಕು. ಬೆಳವಣಿಗೆಯ ದರಗಳನ್ನು ಹೆಚ್ಚಿಸಲು ಮಂಗಳೂರು ಬಂದರು ವಿಸ್ತರಣೆಗಾಗಿ ಅಗಾಧ ಸಂಭಾವ್ಯತೆಯನ್ನು ಪರಿಗಣಿಸಿ ಕರಾವಳಿ ಕಾರಿಡಾರ್ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದರ ಮೂಲಕ ರಫ್ತನ್ನು ಹೆಚ್ಚಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.