ಬೆಂಗಳೂರು: ಶಾಸಕರಾದ ಕೆ. ಜೆ ಜಾರ್ಜ್ ಹಾಗೂ ಅರವಿಂದ್ ಲಿಂಬಾವಳಿ ಒಳ ಒಪ್ಪಂದ ಮಾಡಿಕೊಂಡು ಮಹದೇವಪುರ ಕ್ಷೇತ್ರದ ಪಟ್ಟಂದೂರು ಅಗ್ರಹಾರ ಕೆರೆಯ ಬಫರ್ ವಲಯ ಅತಿಕ್ರಮಣ ಮಾಡುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ. ಶುಕ್ರವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಗರದ ಆಪ್ ಅಧ್ಯಕ್ಷ ಮೋಹನ್ ದಾಸರಿ ಮಾಜಿ ಸಚಿವ ಕೆ. ಜೆ ಜಾರ್ಜ್ ಅಂದಾಜು 20 ಎಕರೆ ಜಮೀನಿಗೆ ರಸ್ತೆ ನಿರ್ಮಿಸಲು ಪಟ್ಟಂದೂರು ಅಗ್ರಹಾರ ಕೆರೆಯ ಬಫರ್ ವಲಯ ಹಾಗೂ ಸಮೀಪದ ರಾಜಕಾಲುವೆ ಒತ್ತುವರಿ ಮಾಡಲಾಗುತ್ತಿದೆ ಎಂದಿದ್ದಾರೆ.
ರಸ್ತೆ ನಿರ್ಮಾಣವನ್ನು ಈ ಹಿಂದೆ ವಿರೋಧಿಸಿದ್ದ ಸ್ಥಳೀಯ ಶಾಸಕ ಅರವಿಂದ್ ಲಿಂಬಾವಳಿ ಈಗ ಅಕ್ರಮಕ್ಕೆ ಸಹಕಾರ ನೀಡುತ್ತಿದ್ದಾರೆ. ಇವರಿಬ್ಬರ ಸ್ವಾರ್ಥಕ್ಕೆ ಕೆರೆಯು ಬತ್ತಿಹೋಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು. ಬಫರ್ ವಲಯವು ಕೆರೆಯ ಅವಿಭಾಜ್ಯ ಅಂಗ. ಬಫರ್ ವಲಯವನ್ನು ಅತಿಕ್ರಮಿಸಿಕೊಂಡು ರಸ್ತೆ ನಿರ್ಮಿಸಿದರೆ, ಕೆರೆಗೆ ನೀರು ಬರುವುದು ಕಡಿಮೆಯಾಗಲಿದೆ ಎಂದರು.
ಬಿಡಿಎಯಿಂದ ಅನುಮೋದನೆ ಸಿಗದಿದ್ದರೂ ರಸ್ತೆ ನಿರ್ಮಾಣ:ಅಕ್ರಮದ ಕುರಿತು ವಿವರ ನೀಡಿದ ಮಹದೇವಪುರ ಕ್ಷೇತ್ರದ ಎಎಪಿ ಅಧ್ಯಕ್ಷ ಅಶೋಕ್ ಮೃತ್ಯುಂಜಯ, ಬಿಡಿಎಯಿಂದ ಅನುಮೋದನೆ ಸಿಗದಿದ್ದರೂ ರಸ್ತೆ ನಿರ್ಮಿಸಲಾಗುತ್ತಿದೆ. ಅವಸರದಲ್ಲಿ ಕಾಮಗಾರಿ ನಡೆಯುತ್ತಿದ್ದು, ಕೇವಲ ಐದಾರು ತಿಂಗಳಿನಲ್ಲಿ ಅರ್ಧ ಕಿಲೋಮೀಟರ್ ರಸ್ತೆಗೆ ಜಾಗವನ್ನು ಮಟ್ಟ ಮಾಡಿ, ಜಲ್ಲಿಕಲ್ಲುಗಳನ್ನು ಹಾಕುವ ಹಂತಕ್ಕೆ ಬಂದಿದ್ದಾರೆ. ಇದೇ ವೇಗದಲ್ಲಿ ಬೆಂಗಳೂರಿನ ಇತರೆ ರಸ್ತೆಗಳ ಕಾಮಗಾರಿಯನ್ನೂ ನಡೆಸಿದರೆ ರಾಜಧಾನಿಯಲ್ಲಿ ರಸ್ತೆಗುಂಡಿಗಳ ಸಮಸ್ಯೆಯೇ ಇರುತ್ತಿರಲಿಲ್ಲ. ಎಸಿಬಿ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿ ದಾಖಲೆ ಒದಗಿಸಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.