ಬೆಂಗಳೂರು : ಮಾಧ್ಯಮಗಳಲ್ಲಿ ನನ್ನ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಯುವಕನೊಬ್ಬನ ವಿರುದ್ಧ ಶಾಂತಿ ನಗರ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮಾಧ್ಯಮಗಳಲ್ಲಿ ಮಾನಹಾನಿ ಬೆದರಿಕೆ : ಯುವಕನ ವಿರುದ್ಧ ದೂರು ದಾಖಲಿಸಿದ ಮೊಹಮ್ಮದ್ ನಲಪಾಡ್...! - Shantinagar MLA N A Harris
ಕಾರ್ಯಕ್ರಮವೊಂದರಲ್ಲಿ ನಡೆದ ಗಲಾಟೆಯಲ್ಲಿ ಯುವಕನೊಬ್ಬ ಮಾಧ್ಯಮಗಳಲ್ಲಿ ನನ್ನ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನಗರದ ತೆಲುಗು ವಿಜ್ಞಾನ ಸಮಿತಿಯಲ್ಲಿ ಯೂತ್ ಕಾಂಗ್ರೆಸ್ ವತಿಯಿಂದ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ನಾನೂ ಭಾಗವಹಿಸಿದ್ದೆ, ಆದರೆ ಗೆದ್ದಿರಲಿಲ್ಲ. ಸಚಿನ್ ಗೌಡ ಎಂಬಾತನು ಸ್ಪರ್ಧಿಸಿದ್ದ, ಆತನೂ ಜಯಗಳಿಸಿರಲಿಲ್ಲ. ಈ ಅಸಮಾಧಾನದಿಂದ ಸುಮ್ಮನೆ ಕ್ಯಾತೆ ತೆಗೆದು, ಆತನ ಜೊತೆಗಿದ್ದ ಶಾಸಕರ ಮಗ ಗೌತಮ್ ಎಂಬಾತನನ್ನು ವೇದಿಕೆ ಮೇಲೆ ಯಾಕೆ ಕೂರಿಸಿಲ್ಲ ಎಂದು ಗಲಾಟೆ ಆರಂಭಿಸಿದ್ದಾನೆ. ನಮ್ಮ ಕಾರ್ಯಕರ್ತರೊಂದಿಗೆ ವಾಗ್ವಾದ ನಡೆಸುತ್ತಿರುವಾಗ ನಾನು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದೆ. ಈ ವೇಳೆ ಇದು ನಮ್ಮ ವಿಚಾರ ನಿನಗೂ ಇದಕ್ಕೂ ಸಂಬಂಧವಿಲ್ಲ ಎಂದ. ನಾನು ಯೂತ್ ಕಾಂಗ್ರೆಸ್ ಬೆಂಗಳೂರು ನಗರ ಅಧ್ಯಕ್ಷನಾಗಿರುವುದರಿಂದ ಕೇಳ್ತಿದ್ದೀನಿ ಎಂದು ಪ್ರತಿಕ್ರಿಯಿಸಿದೆ. ಬಳಿಕ ಅಲ್ಲಿದ್ದವರು ಎಲ್ಲರನ್ನೂ ಹೊರ ಕಳಿಸಿದರು. ಹೊರಗಡೆ ಬರುತ್ತಿದ್ದಂತೆ. ನನಗೆ ಬೆದರಿಕೆ ಹಾಕಿದ ಸಚಿನ್ ಗೌಡ, ಮಾಧ್ಯಮಗಳಲ್ಲಿ ನಿನ್ನ ಮಾನ ಹರಣ ಮಾಡುವುದಾಗಿ ಹೇಳಿದ್ದಾನೆ. ಹೀಗಾಗಿ ದೂರು ನೀಡಿದ್ದೇನೆ ಎಂದು ತಿಳಿಸಿದರು.
ಸಚಿನ್ ಗೌಡ ನಮ್ಮ ಪಕ್ಷದ ಕಾರ್ಯಕರ್ತನಲ್ಲ. ನಮ್ಮ ಕಾರ್ಯಕರ್ತನಾಗಿದ್ದರೆ, ಪಕ್ಷದೊಳಗೆ ಬಗೆಹರಿಸಿಕೊಳ್ಳುತ್ತಿದ್ದೆವು. ಹೀಗಾಗಿ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ನಲಪಾಡ್ ಸ್ಪಷ್ಟನೆ ನೀಡಿದ್ದಾರೆ.