ಬೆಂಗಳೂರು :ರಾಜ್ಯ ಯುವ ಕಾಂಗ್ರೆಸ್‌ಗೆ ಮುಂದಿನ 2 ವರ್ಷಗಳಿಗೆ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ಮೇರೆಗೆ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿವಿ ಇಂದು ಆದೇಶ ಹೊರಡಿಸಿದ್ದಾರೆ.
ಕೋವಿಡ್ ಆತಂಕ ಹಿನ್ನೆಲೆಯಲ್ಲಿ ಕಳೆದ ವರ್ಷ ಆನ್ಲೈನ್ ಮೂಲಕ ಚುನಾವಣೆ ನಡೆಸಲಾಗಿತ್ತು. ಅತಿ ಹೆಚ್ಚು ಮತ ಗಳಿಸಿದ ಮೊಹಮ್ಮದ್ ನಲಪಾಡ್ ಆಯ್ಕೆಯನ್ನು ಅನರ್ಹಗೊಳಿಸಿದ ಪಕ್ಷದ ಹೈಕಮಾಂಡ್ ಎರಡನೇ ಅತಿ ಹೆಚ್ಚು ಮತ ಗಳಿಸಿದ್ದ ರಕ್ಷಾ ರಾಮಯ್ಯರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತ್ತು.
ಆದರೆ, ಈ ಘೋಷಣೆ ಬೆನ್ನಲ್ಲೆ ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಸಮಾಲೋಚಿಸಿದ್ದ ನಲಪಾಡ್, ಅಧ್ಯಕ್ಷಗಾದಿಗೆ ಏರಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಅವರ ಪರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಹ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು.
ಅದಾಗಲೇ ರಕ್ಷಾ ರಾಮಯ್ಯ ಹೆಸರು ಘೋಷಣೆಯಾದ ಹಿನ್ನೆಲೆಯಲ್ಲಿ ಮೂರು ವರ್ಷ ಕಾಲಾವಧಿಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಮೊದಲ ಒಂದು ವರ್ಷ ರಕ್ಷಾ ರಾಮಯ್ಯ ಹಾಗೂ ನಂತರದ ಎರಡು ವರ್ಷ ಮಹಮ್ಮದ್ ನಲಪಾಡ್ ಅಧಿಕಾರ ಹಂಚಿಕೊಳ್ಳಬೇಕು ಎಂದು ತೀರ್ಮಾನಿಸಲಾಗಿತ್ತು.
2020ರ ಡಿಸೆಂಬರ್ನಲ್ಲಿ ಅಧಿಕಾರ ವಹಿಸಿಕೊಳ್ಳಬೇಕೆಂದು ರಕ್ಷಾ ರಾಮಯ್ಯ ಆಯ್ಕೆ ವಿಚಾರದಲ್ಲಿ ಎದುರಾದ ವಿವಿಧ ಗೊಂದಲಗಳ ಹಿನ್ನೆಲೆ ಜನವರಿಯಲ್ಲಿ ಅಧಿಕೃತವಾಗಿ ಅಧ್ಯಕ್ಷ ಪದವಿ ಅಲಂಕರಿಸಿದ್ದರು. ಇಂದಿಗೆ ಅವರ ಅಧಿಕಾರ ಅವಧಿ ಪೂರ್ಣಗೊಂಡಿದೆ. ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾಗಿ ಒಂದು ವರ್ಷ ಅಧಿಕಾರ ನಡೆಸಿ ಎಂದು ಮೊಹಮ್ಮದ್ ನಲಪಾಡ್ಗೆ ಕಚೇರಿಯನ್ನು ಬಿಟ್ಟುಕೊಟ್ಟಿದ್ದಾರೆ.
ಇದನ್ನೂ ಓದಿ: ದಿ. ಮಾದೇಗೌಡರ ಬಗ್ಗೆ ಅವಹೇಳನ : ಜೆಡಿಎಸ್ನಿಂದ ಶಿವರಾಮೇಗೌಡ ಉಚ್ಚಾಟನೆ
ಇಂದು ತಮ್ಮ ಹುಟ್ಟುಹಬ್ಬವನ್ನು ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿರುವ ಯುವ ಕಾಂಗ್ರೆಸ್ ಕಚೇರಿ ಮುಂಭಾಗವೇ ಆಚರಿಸಿಕೊಂಡಿರುವ ಮಹಮ್ಮದ್ ನಲಪಾಡ್, ಅಧಿಕೃತವಾಗಿ ಕಚೇರಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಫೆಬ್ರುವರಿ 10ಕ್ಕೆ ಪದಗ್ರಹಣ :ರಾಜ್ಯ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಫೆಬ್ರುವರಿ 10ರಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿರುವ ಮಹಮ್ಮದ್ ನಲಪಾಡ್, ಇದಕ್ಕಾಗಿ ವಿಶೇಷ ಸಮಾರಂಭದ ಆಯೋಜನೆಗೆ ಮುಂದಾಗಿದ್ದಾರೆ. ಕೋವಿಡ್ ನಿಯಮಾವಳಿಗಳ ಅಡೆತಡೆ ನಡುವೆಯೂ ನೂರಾರು ಜನರನ್ನು ಒಂದೆಡೆ ಸೇರಿಸಿ ಅಧಿಕಾರ ಸ್ವೀಕರಿಸುವ ಸಿದ್ಧತೆ ಆರಂಭಿಸಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ವಿಶೇಷ ವೇದಿಕೆಯಲ್ಲಿ ರಕ್ಷಾ ರಾಮಯ್ಯರಿಂದ ಮೊಹಮ್ಮದ್ ನಲಪಾಡ್ ಅಧಿಕಾರ ಪಡೆದುಕೊಳ್ಳಲಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ