ಬೆಂಗಳೂರು: ನಗರದಲ್ಲಿ ಮಳೆಯಿಂದ ಮನೆಗಳಿಗೆ ಮತ್ತು ರಸ್ತೆಯಲ್ಲಿ ನೀರು ನುಗ್ಗಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸಲು ಮುಂದಾಗಿರುವ ಬಿಬಿಎಂಪಿ ಅಧಿಕಾರಿಗಳು ಕಾಂಗ್ರೆಸ್ನ ಹಿರಿಯ ಶಾಸಕ ಹ್ಯಾರಿಸ್ ಅವರ ಪುತ್ರ ಮಹ್ಮದ್ ನಲಪಾಡ್ ಅವರಿಗೆ ಸೇರಿದ್ದೆನ್ನಲಾದ ನಲಪಾಡ್ ಅಕಾಡೆಮಿ ಒತ್ತುವರಿ ತೆರವು ಮಾಡಲು ಮುಂದಾದಾಗ ಸ್ಥಳದಲ್ಲಿ ಹೈಡ್ರಾಮವೇ ನಡೆದಿದೆ.
ಒತ್ತರಿಗೆ ಮುಂದಾಗಿದ್ದ ಬಿಬಿಎಂಪಿ ಅಧಿಕಾರಿಗಳಿಗೆ ನಲಪಾಡ್ ಅಕಾಡೆಮಿಯ ಸಿಬ್ಬಂದಿಗಳು ಅವಾಜ್ ಹಾಕಿದ್ದು, ನೋಟಿಸ್ ನೀಡದೆ ತೆರವಿಗೆ ಮುಂದಾಗಿದ್ದೀರಿ ಎಂದು ಪಾಲಿಕೆಯಿಂದ ನಡೆಸಲಾಗುತ್ತಿದ್ದ ಡೆಮಾಲಿಷನ್ ತಡೆಯುವುದಕ್ಕೆ ಮುಂದಾದರು. ರಾಜ ಕಾಲುವೆ ಒತ್ತುವರಿ ಮಾಡಿಕೊಂಡಿಲ್ಲ ಎಂಬುದಾಗಿ ಹೇಳಿ ದಾಖಲೆಗಳನ್ನು ನೀಡುವುದಾಗಿ ತಿಳಿಸಿದ್ದ ನಲಪಾಡ್, ಒತ್ತುವರಿ ತೆರವು ಮಾಡಿಲ್ಲ ಎನ್ನುವುದಕ್ಕೆ ಯಾವುದೇ ದಾಖಲೆಗಳನ್ನು ನೀಡಿರಲಿಲ್ಲ. ಜತೆಗೆ, ಸಿಬ್ಬಂದಿ ತೆರವು ಕಾರ್ಯಾಚರಣೆಗೆ ಅಡ್ಡಿ ಪಡಿಸಿದರು. ಆದರೂ ಬಿಬಿಎಂಪಿ ಅಧಿಕಾರಿಗಳು ಇದಕ್ಕೆ ಬಗ್ಗದೆ ಒತ್ತುವರಿಯನ್ನು ತೆರವು ಮಾಡಿದರು.
ನಲಪಾಡ್ ಅಕಾಡೆಮಿ ಸಿಬ್ಬಂದಿಯಿಂದ ಕಾರ್ಯಾಚರಣೆ ನಿಲ್ಲಿಸುವಂತೆ ಒತ್ತಡ ಹೇರಲಾಗಿತ್ತು. ಈ ವೇಳೆ ಬಿಬಿಎಂಪಿ ಅಧಿಕಾರಿಗಳು ಎರಡು ಬಾರಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು. ಆದರೂ, ದಾಖಲೆಗಳನ್ನು ಒದಗಿಸಿದ ಹಿನ್ನೆಲೆ ತೆರವು ಕಾರ್ಯಾಚರಣೆ ಮುಂದುವರೆಯಿತು.
ಅಧಿಕಾರಿಗಳ ವಿರುದ್ಧ ತರಾಟೆ :ಜನರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ, ಈವರೆಗೂ ಯಾವುದೇ ಸಮಸ್ಯೆ ಪರಿಹಾರ ಮಾಡಿಲ್ಲ. ಆದರೆ, ಒತ್ತುವರಿ ತೆರವು ಮಾಡುವುದಕ್ಕೆ ಮುಂದಾಗಿದ್ದೀರ ಎಂದು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದರು.