ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನೋಟ್ ಬ್ಯಾನ್ ವಿಚಾರದಲ್ಲಿ ಮಾಡಿಕೊಂಡ ಎಡವಟ್ಟು ದೇಶದ ಆರ್ಥಿಕತೆ ಕುಸಿಯುವಂತೆ ಮಾಡಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಟ್ವೀಟ್ ಮೂಲಕ ಈ ಆರೋಪ ಮಾಡಿರುವ ದಿನೇಶ್ ಗುಂಡೂರಾವ್, 'ನೋಟ್ ಬ್ಯಾನ್' ಪ್ರಧಾನಿ ಮೋದಿಯವರ ಐತಿಹಾಸಿಕ ಪ್ರಮಾದ. ದೇಶದ ಜಿಡಿಪಿ ಕುಸಿತಕ್ಕೆ ಅಡಿಪಾಯ ಹಾಕಿದ್ದೇ, ಈ ನೋಟ್ ಬ್ಯಾನ್. 'ನಗದು ಮುಕ್ತ ಭಾರತ'ದ ಪ್ರಚಾರ ಕೊಟ್ಟು ನೋಟ್ ಬ್ಯಾನ್ ಮಾಡಿದ್ದ ಮೋದಿಜಿ, ಈಗ ಭಾರತದ ಜನರನ್ನೇ 'ಕ್ಯಾಶ್‌ಲೆಸ್' ಮಾಡಿಬಿಟ್ಟಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ಟ್ವೀಟ್:
ಕಾಂಗ್ರೆಸ್ ಪಕ್ಷ ಕೂಡ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಜಿಎಸ್ಟಿ ವಿಚಾರದಲ್ಲಿ ಕೇಂದ್ರ ರಾಜ್ಯಕ್ಕೆ ದೊಡ್ಡ ವಂಚನೆ ಮಾಡಿದೆ ಎಂದು ಆರೋಪಿಸಿದೆ.
ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, ಕೇಂದ್ರದಿಂದ ಜಿಎಸ್ಟಿ ಮಹಾ ವಂಚನೆ. ಮೋದಿಯ ದುರಾಡಳಿತಕ್ಕೆ ರಾಜ್ಯವೇಕೆ ಬೆಲೆ ತೆರಬೇಕು? ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ, ನಿಮ್ಮ ಅಸಮರ್ಥತೆ ರಾಜ್ಯದ ಹಿತವನ್ನೇಕೆ ಬಲಿ ಕೊಡುತ್ತಿರುವಿರಿ? ಕರ್ನಾಟಕವನ್ನು ಆರ್ಥಿಕ ಅಧೋಗತಿಗೆ ತಳ್ಳುತ್ತಿರುವ ನಿಮಗೆ ಅಧಿಕಾರದಲ್ಲಿ ಮುಂದುವರೆಯಲು ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದೆ.