ಬೆಂಗಳೂರು: ಗುಜರಾತ್ ರಾಜ್ಯದ ಅಹಮದಾಬಾದ್ ಕನ್ನಡ ಸಂಘ 75ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಏಕ ಭಾರತ್, ಶ್ರೇಷ್ಠ ಭಾರತ್. ಇಂತಹ ಸಾಂಸ್ಕೃತಿಕ ವಿನಿಮಯಗಳು ಉತ್ತೇಜನಕಾರಿ. ಕರ್ನಾಟಕದ ಸಂಸ್ಕೃತಿ ಮತ್ತು ಕನ್ನಡ ಭಾಷೆಯನ್ನು ಭಾರತದಾದ್ಯಂತ ವ್ಯಾಪಕವಾಗಿ ಗೌರವಿಸಲಾಗುತ್ತಿದೆ ಎಂದು ಮೋದಿ ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ.
ಅಹಮದಾಬಾದ್‌ನಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಸ್ಥಳ ನೀಡುವಂತೆ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೋರಿದ್ದಾರೆ. ಗುಜರಾತ್ನ ಅಹಮದಾಬಾದ್‌ನಲ್ಲಿ ಕನ್ನಡ ಸಂಘದ 75ನೇ ವಾರ್ಷಿಕೋತ್ಸವದಲ್ಲಿ ಅವರು ಪಾಲ್ಗೊಂಡಿದ್ದರು. ಈ ವೇಳೆ ಗುಜರಾತ್ ಸಿಎಂಗೆ ಮನವಿ ಮಾಡಿರುವ ಜೋಶಿಯವರು, ಕರ್ನಾಟಕ ಭವನ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಸರ್ಕಾರ ಹಾಗೂ ತಮ್ಮ ವೈಯಕ್ತಿಕ ಸಹಕಾರ ನೀಡುವುದಾಗಿ ಹೇಳಿದರು.
ಏಕ ಭಾರತ್ ಶ್ರೇಷ್ಠ ಭಾರತ್ ಕಾರ್ಯಕ್ರಮ
ವಾರ್ಷಿಕೋತ್ಸವದಲ್ಲಿ ಮಾತನಾಡಿದ ಕೇಂದ್ರ ಸಂಸದೀಯ ಮತ್ತು ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಗುಜರಾತ್ನ ಕನ್ನಡಿಗರೊಂದಿಗೆ ಎರಡು ರಾಜ್ಯಗಳು ಹೊಂದಿರುವ ವಿಶೇಷ ಬಾಂಧವ್ಯದ ಕುರಿತ ಹಲವು ವಿಚಾರಗಳನ್ನು ಹಂಚಿಕೊಂಡರು. ಒಂದೆಡೆ ದೇಶದ ಆಜಾದಿ ಕಾ ಅಮೃತ ಮಹೋತ್ಸವ ನಡೆಯುತ್ತಿದೆ. ಗುಜರಾತ್ನಲ್ಲಿ ಕನ್ನಡ ಸಂಘದ 75ನೇ ವರ್ಷದ ಸಂಭ್ರಮ ನಡೆಯುತ್ತಿದೆ.
ಏಕ ಭಾರತ್ ಶ್ರೇಷ್ಠ ಭಾರತ್ ಕಾರ್ಯಕ್ರಮ
ಅಂದಿನ ದಿನಗಳಲ್ಲಿಯೇ ಕನ್ನಡಿಗರು ಗುಜರಾತ್ ರಾಜ್ಯಕ್ಕೆ ಬಂದು, ಇಲ್ಲಿನ ಜನರೊಂದಿಗೆ ಬೆರೆತು, ವ್ಯಾಪಾರ-ವಹಿವಾಟು ನಡೆಸಿ ಗುಜರಾತನ ಏಳಿಗೆಗೆ ಕೊಡುಗೆಗಳನ್ನು ನೀಡಿದ್ದಾರೆ. ಇದು ಶ್ಲಾಘನೀಯ ಕಾರ್ಯ. ನರ್ಮದಾ ನದಿಯಿಂದ ಕಾವೇರಿ ವರೆಗೆ ಕನ್ನಡ ಹಾಗೂ ಗುಜರಾತಿ ಮಾತನಾಡುವವರಿದ್ದಾರೆ. ಈ ಬಾಂಧವ್ಯ ನೂರಾರು ವರ್ಷಗಳಿಂದೆ ನಡೆದುಕೊಂಡು ಬಂದಿದೆ ಎಂದು ಜೋಶಿ ಸಂತಸ ವ್ಯಕ್ತಪಡಿಸಿದರು.
ಏಕ ಭಾರತ್ ಶ್ರೇಷ್ಠ ಭಾರತ್ ಕಾರ್ಯಕ್ರಮ
ಆರ್ಎಸ್ಎಸ್, ಜನ ಸಂಘ ಹಾಗೂ ಬಿಜೆಪಿಯನ್ನು ಕಟ್ಟುವಾಗ ಆರಂಭಿಕ ದಿನಗಳಲ್ಲಿ ನಮಗೆ ಸಹಕಾರ ನೀಡುತ್ತಿದ್ದವರು ಗುಜರಾತಿಗಳು. ಈ ದೃಷ್ಟಿಯಿಂದ, ಈ ಸಮುದಾಯದೊಂದಿಗೆ ನನ್ನ ವಿಶೇಷ ಸಂಬಂಧವಿದೆ ಎಂದು ಜೋಶಿ ತಮ್ಮ ಹಳೆಯ ನೆನಪುಗಳನ್ನ ಸ್ಮರಿಸಿದರು. ಇಂದು ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ದೇಶ ಅಭೂತಪೂರ್ವ ಬೆಳವಣಿಗೆ ಕಾಣುತ್ತಿದೆ. 200 ವರ್ಷಗಳವರೆಗೆ ನಮ್ಮನ್ನು ಆಳಿ, ದೇಶ ಬಿಟ್ಟು ಹೋಗುವಾಗ ಅಪಹಾಸ್ಯ ಮಾಡಿ, ಈ ದೇಶದ ಏಳಿಗೆ ಸಾಧ್ಯವೇ ಇಲ್ಲ ಎಂಬ ರೀತಿಯಲ್ಲಿ ಮಾತನಾಡಿದ್ದ ಬ್ರಿಟಿಷರನ್ನು ಹಿಂದಿಕ್ಕಿ ನಾವು ಇಂದು ಐದನೇ ಅತ್ಯಂತ ಪ್ರಬಲ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದೇವೆ. ಈ ಸಾಧನೆಯಲ್ಲಿ ಕರ್ನಾಟಕ ಹಾಗೂ ಗುಜರಾತ್ ಅತ್ಯಂತ ಮಹತ್ವದ ಕೊಡುಗೆಗಳನ್ನು ನೀಡಿವೆ ಎಂದು ಸಚಿವ ಪ್ರಹ್ಲಾದ್ ಜೋಶಿ ತಮ್ಮ ಅನಿಸಿಕೆ ಹಂಚಿಕೊಂಡರು.
ಈಗ ಸರ್ಕಾರ ಕೈಗೆತ್ತಿಕೊಂಡಿರುವ ಮತ್ತೊಂದು ಮಹತ್ವದ ಕಾರ್ಯ ನೂತನ ಶಿಕ್ಷಣ ನೀತಿ. ರಾಷ್ಟ್ರದ ಭವಿಷ್ಯದ ದೃಷ್ಟಿಯಿಂದ ಇದು ಅತ್ಯಂತ ಉತ್ತಮ ನೀತಿಯಾಗಿದೆ. ಆಯಾ ರಾಜ್ಯದಲ್ಲಿ, ಅಲ್ಲಿನ ಮಾತೃ ಭಾಷೆಗೆ ಪ್ರಾಮುಖ್ಯತೆ ನೀಡಲಾಗಿದೆ. ಇಂಗ್ಲಿಷ್‌ಗಿಂತ ಪುರಾತನ ಇತಿಹಾಸ ಹೊಂದಿರುವ ಭಾಷೆಗಳು ನಮ್ಮ ದೇಶದಲ್ಲಿದ್ದು, ಅವುಗಳಿಗೆ ಪ್ರಾಮುಖ್ಯತೆ ನೀಡುವ ದೃಷ್ಟಿಯಿಂದ ಈ ನೀತಿ ಜಾರಿಗೊಳಿಸಲಾಗುತ್ತಿದೆ. 19 ಹಾಗೂ 20ನೇ ಶತಮಾನಗಳು ಪಾಶ್ಚಿಮಾತ್ಯರ ಪಾಲಾಗಿದ್ದರೇ, 21ನೇ ಶತಮಾನ ಭಾರತದ್ದಾಗಿ ಮಾಡುವ ಸಂಕಲ್ಪದೊಂದಿಗೆ ಪ್ರಧಾನಿ ಮೋದಿ ಹಾಗೂ ಶ್ರೀ ಅಮಿತ್ ಶಾ ಅವರ ನೇತೃತ್ವದಲ್ಲಿ ನಾವು ಶ್ರಮಿಸುತ್ತಿದ್ದೇವೆ ಎಂದು ಇದೇ ವೇಳೆ ಜೋಶಿ ಹೇಳಿದರು.
(ಓದಿ: 'ಟಿಪ್ಪು ಎಕ್ಸ್‌ಪ್ರೆಸ್ ರೈಲಿಗೆ ಒಡೆಯರ್ ಎಕ್ಸ್‌ಪ್ರೆಸ್ ಎಂದು ಮರುನಾಮಕರಣ ಮಾಡಿರುವುದು ಸಂತೋಷದ ವಿಷಯ')