ಕರ್ನಾಟಕ

karnataka

ETV Bharat / state

ನ.11ಕ್ಕೆ ಮೋದಿ ಬೆಂಗಳೂರಿಗೆ ಭೇಟಿ.. ಕೆಂಪೇಗೌಡರ ಪುತ್ಥಳಿ ಅನಾವರಣ: ವಿಮಾನ ನಿಲ್ದಾಣ ಟರ್ಮಿನಲ್ 2 ಉದ್ಘಾಟನೆ - ಭಾರತ್ ಗೌರವ್ ಕಾಶಿ ದರ್ಶನ ರೈಲಿಗೆ ಹಸಿರು ನಿಶಾನೆ

ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11 ರಂದು ಬೆಂಗಳೂರಿಗೆ ಆಗಮಿಸುವರು. ವಿಮಾನ ನಿಲ್ದಾಣ ಟರ್ಮಿನಲ್​ 2 ಉದ್ಘಾಟನೆ, ವಂದೇ ಭಾರತ್ ರೈಲು, ಭಾರತ್ ಗೌರವ್ ಕಾಶಿ ದರ್ಶನ ರೈಲಿಗೆ ಹಸಿರು ನಿಶಾನೆ, ಕೆಂಪೇಗೌಡರ ಪುತ್ಥಳಿ ಅನಾವರಣ ಮಾಡುವರು.

Prime Minister Narendra ModiEtv Bharat
ಪ್ರಧಾನಿ ನರೇಂದ್ರ ಮೋದಿ

By

Published : Nov 9, 2022, 5:45 PM IST

Updated : Nov 9, 2022, 6:23 PM IST

ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಅವರುನವೆಂಬರ್ 11 ರಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಅಂದು ನಾಲ್ಕು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ನಂತರ ಮಧ್ಯಾಹ್ನ ತಮಿಳುನಾಡಿನ ಮಧುರೈ ಕಡೆಗೆ ಪ್ರಯಾಣ ಬೆಳೆಸುವರು.

ಅಂದು ಬೆಳಗ್ಗೆ 6.20 ಕ್ಕೆ ದೆಹಲಿ ವಾಯುನೆಲೆಯಿಂದ ಪ್ರಯಾಣಿಸಲಿರುವ ನರೇಂದ್ರ ಮೋದಿ ಅವರು, ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ತಲುಪುವರು. ಹೆಚ್.ಎ.ಎಲ್ ನಿಂದ ಹೆಲಿಕ್ಯಾಪ್ಟರ್ ಮೂಲಕ ವಿಧಾನಸೌಧದ ಸಮೀಪದ ಹೆಲಿಪ್ಯಾಡ್​​​ಗೆ ತಲುಪಿ, ರಸ್ತೆ ಮೂಲಕ 9.45 ಕ್ಕೆ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ಶಾಸಕರ ಭವನದ ಆವರಣದಲ್ಲಿರುವ ಕನಕದಾಸ ಮತ್ತು ವಾಲ್ಮೀಕಿ ಪ್ರತಿಮೆಗಳಿಗೆ ಮಾಲಾರ್ಪಣೆ ನೆರವೇರಿಸಿ ಗೌರವ ಸಲ್ಲಿಸುವರು.

ವಂದೇ ಭಾರತ್ ರೈಲು:10 ಗಂಟೆಗೆ ವಿಧಾನಸೌಧದಿಂದ ಹೊರಟು ಮೆಜೆಸ್ಟಿಕ್​​​ನ ಸಂಗೊಳ್ಳಿ ರಾಯಣ್ಣ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ರಸ್ತೆ ಮಾರ್ಗದ ಮೂಲಕ ತೆರಳಿ,10.20 ಕ್ಕೆ ವಂದೇ ಭಾರತ್ ರೈಲು ಮತ್ತು ಭಾರತ್ ಗೌರವ್ ಕಾಶಿ ದರ್ಶನ ರೈಲಿಗೆ ಹಸಿರು ನಿಶಾನೆ ತೋರುವರು.

ವಿಮಾನ ನಿಲ್ದಾಣ ಟರ್ಮಿನಲ್2 ಉದ್ಘಾಟನೆ:10.45ಕ್ಕೆ ರೈಲ್ವೆ ನಿಲ್ದಾಣದಿಂದ ಹೊರಟು ಹೆಬ್ಬಾಳ ಹೆಲಿಪ್ಯಾಡ್​​​​ಗೆ ತೆರಳಲಿದ್ದಾರೆ. ಅಲ್ಲಿಂದ 11 ಗಂಟೆಗೆ ಹೆಲಿಕ್ಯಾಪ್ಟರ್ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಪ್ರಧಾನಿಗಳು, 11.30 ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರ ಉದ್ಘಾಟನೆ ನೆರವೇರಿಸಲಿದ್ದಾರೆ.

ಕೆಂಪೇಗೌಡರ ಪುತ್ಥಳಿ ಅನಾವರಣ:ಅಪರಾಹ್ನ 12 ಗಂಟೆಗೆ ವಿಮಾನ ನಿಲ್ದಾಣದ ಸಮೀಪದಲ್ಲಿ ಸ್ಥಾಪಿಸಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪುತ್ಥಳಿಯನ್ನು ಪ್ರಧಾನಿ ಮೋದಿ ಅನಾವರಣಗೊಳಿಸುವರು. 12.30 ರಿಂದ 1.30 ರವರೆಗೆ ಸಾರ್ವಜನಿಕ ಸಭೆಯಲ್ಲಿ ಭಾವಹಿಸುವರು. ನಂತರ ಮಧ್ಯಾಹ್ನ 1.45 ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ತಮಿಳುನಾಡಿನ ಮಧುರೈ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ.

ಬೆಂಗಳೂರು ತಲುಪಿದ ನಂತರ ಬಿಡುವಿಲ್ಲದ ಕಾರ್ಯಕ್ರಮಗಳ ಆಯೋಜನೆ ಇದ್ದು, ಕಾರ್ಯಕ್ರಮಗಳು ಮುಗಿಯುತ್ತಿದ್ದಂತೆ ಮೋದಿ ತಮಿಳುನಾಡು ಕಡೆ ಪ್ರಯಾಣಿಸಲಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಈ ಬಾರಿಯ ರಾಜ್ಯ ಪ್ರವಾಸದ ವೇಳೆ ರಾಜ್ಯ ರಾಜಕೀಯ ವಿಷಯಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ನಾಯಕರ ಜತೆ ಚರ್ಚೆ ನಡೆಸುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ.
ಇದನ್ನೂಓದಿ:ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿಗೆ 15 ಪ್ರಶ್ನೆಗಳನ್ನಿಟ್ಟ ಕಾಂಗ್ರೆಸ್​

Last Updated : Nov 9, 2022, 6:23 PM IST

ABOUT THE AUTHOR

...view details