ರಾಜ್ಯದ 40 ಪರ್ಸೆಂಟ್ ಕಮಿಷನ್ ಬಗ್ಗೆ ಮೋದಿ ಮಾತನಾಡಬೇಕು: ಆಪ್ ಮುಖಂಡ ಬ್ರಿಜೇಶ್ ಕಾಳಪ್ಪ ಆಗ್ರಹ ಬೆಂಗಳೂರು:ಗುತ್ತಿಗೆದಾರರಿಂದ ಶಾಸಕ ತಿಪ್ಪಾರೆಡ್ಡಿ ಕಮಿಷನ್ ಪಡೆದ ಆರೋಪದ ಕುರಿತು ತನಿಖೆಯಾಗಬೇಕು. ರಾಜ್ಯದಲ್ಲಿ ಕೇಳಿ ಬರುತ್ತಿರುವ 40 ಪರ್ಸೆಂಟ್ ಕಮಿಷನ್ ವಿಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡಬೇಕು, ಕ್ರಮ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಾರ್ಟಿ ಮುಖಂಡ ಹಾಗೂ ಸುಪ್ರೀಂಕೋರ್ಟ್ ವಕೀಲ ಬ್ರಿಜೇಶ್ ಕಾಳಪ್ಪ ಆಗ್ರಹಿಸಿದ್ದಾರೆ.
ಕುಮಾರ್ ಪಾರ್ಕ್ನಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಂಪಣ್ಣ ಕಳೆದ 2 ವರ್ಷದಿಂದ 40 ಪರ್ಸೆಂಟ್ ಕಮೀಷನ್ ಬಗ್ಗೆ ಸತತವಾಗಿ ಮಾತನಾಡುತ್ತಲೇ ಬರುತ್ತಿದ್ದಾರೆ. ಪ್ರಧಾನಿ ಮೋದಿಗೂ ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ಸಂಪೂರ್ಣ ಮಾಹಿತಿ ಕೊಟ್ಟಿದ್ದಾರೆ. ಆದರೆ, ಭ್ರಷ್ಟಾಚಾರದ ಕೆಲಸ ಕತ್ತಲಿನಲ್ಲಿ ಆಗುತ್ತದೆ. ಹಾಗಾಗಿ ದಾಖಲೆ ಕೊಡಿ ಎಂದು ಸರ್ಕಾರದವರು ತಪ್ಪಿಸಿಕೊಳ್ಳುವ ಪಲಾಯನವಾದ ಮಾಡುತ್ತಿದ್ದಾರೆ. ಇದರಲ್ಲಿ ತನಿಖೆ ನಡೆಸಿದರೆ ತುಂಬಾ ವಿಷಯಗಳು ಹೊರಗಡೆ ಬರಲಿವೆ. ಆದರೆ ಇದನ್ನು ಮಾಡಲು ಅವರಿಗೆ ಇಷ್ಟವಿಲ್ಲ ಎಂದು ಆರೋಪಿಸಿದರು.
ನರೇಂದ್ರ ಮೋದಿ ಪ್ರಧಾನಿಯಾದ ನಂತರ ರಾಜನಾಥ್ ಸಿಂಗ್ ಅವರನ್ನು ಕರೆಸಿಕೊಂಡು ನಿಮ್ಮ ಮಗ ಪಂಕಜ್ ಸಿಂಗ್ ಯಾವುದೋ ಲೇವಾದೇವಿಯಲ್ಲಿ ಗುತ್ತಿಗೆದಾರರಿಂದ ಹಣ ಪಡೆದಿದ್ದಾರೆ ಇದನ್ನು ವಾಪಸ್ ಕೊಡಿ ಎಂದಿದ್ದರು. ಈ ವಾಟ್ಸ್ಆ್ಯಪ್ ಮೆಸೇಜ್ ಎಲ್ಲರಿಗೂ ಸಿಕ್ಕಿದೆ. ಈಗ ಗುತ್ತಿಗೆದಾರ ಮಂಜುನಾಥ್ ಎನ್ನುವವರಿಂದ 90 ಲಕ್ಷ ಹಣ ಪಡೆದ ದೊಡ್ಡ ಆರೋಪ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಮೇಲಿದೆ. ರಾಜ್ಯದ ಬಜೆಟ್ 2 ಲಕ್ಷ ಕೋಟಿ ಇದೆ. ಇದರಲ್ಲಿ 40 ಪರ್ಸೆಂಟ್ ಕಮಿಷನ್ ಎಂದರೆ ಬಜೆಟ್ನಲ್ಲಿನ ಹಣದಲ್ಲಿ 80 ಸಾವಿರ ಕೋಟಿ ಕೆಲೆಕ್ಷನ್ ಕಮಿಷನ್ನಲ್ಲಿ ನಡೆಯುತ್ತಿದೆ. ಹಾಗಾದರೆ ಭ್ರಷ್ಟಾಚಾರ ಎಷ್ಟು ದೊಡ್ಡದಿದೆ ಎಂದು ಅಂದಾಜಿಸಿ ಎಂದು ಬಿಜೆಪಿ ವಿರುದ್ಧ ಗುರುತರ ಆರೋಪ ಮಾಡಿದರು.
ಪ್ರಧಾನಿ ಮೋದಿಗೆ ಕಮಿಷನ್ ಕುರಿತು ಪತ್ರ ಬರೆದು ವಿಚಾರ ಮುಂದಿಟ್ಟರೂ ಪ್ರಧಾನಿ ಮೋದಿ ಜವಾಬಿಲ್ಲ, ಮನಮೋಹನ್ ಸಿಂಗ್ ಮೌನಿಬಾಬಾ. ಆದರೆ, ಇವರು ಬೇರೆ ಬಾಬಾ ಬಾಯಿ ಮುಚ್ಚಿರುವ ಬಾಬಾ. ಕೇಂದ್ರ, ರಾಜ್ಯ ಸರ್ಕಾರ ಬೇರೆ ಬೇರೆ ಅಲ್ಲ, ಅವರ ಲೆಕ್ಕದ ಪ್ರಕಾರ ಕೇಂದ್ರ ಸರ್ಕಾರ ಭ್ರಷ್ಟಾಚಾರ ಮುಕ್ತವಾಗಿದ್ದರೆ, ರಾಜ್ಯದಲ್ಲಿಯೂ ಅದನ್ನು ಜಾರಿಗೆ ತರಬೇಕು. 40 ಪರ್ಸೆಂಟ್ ಇದ್ದ ಕಮಿಷನ್ ಈಗ 50 ಪರ್ಸೆಂಟ್ ಆಗಿದೆ. ಸತತವಾಗಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬರುತ್ತಿದ್ದಾರೆ. ಹಾಗಾಗಿ ಅವರು ಈ ಬಗ್ಗೆ ಮಾತನಾಡಬೇಕು, ಕ್ರಮ ಕೈಗೊಳಗ್ಳಬೇಕು ಎಂದು ಆಗ್ರಹಿಸಿದರು.
ಗುತ್ತಿಗೆದಾರರಿಂದ ಕಮಿಷನ್ ಪಡೆಯುವ ಆರೋಪ ಬರೀ ಬಿಜೆಪಿಯ ಮೇಲಿಲ್ಲ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮೇಲೆಯೂ ಇದೆ. ಈ ಮೂರೂ ಪಕ್ಷಗಳೂ ಕೂಡ ಇದರಲ್ಲಿ ಮುಳುಗಿದೆ ಎನ್ನುವ ವಿಚಾರವನ್ನು ಗುತ್ತಿಗೆದಾರರ ಸಂಘದವರು ಮುಂದಿಟ್ಟಿದ್ದಾರೆ. ಪಂಜಾಬ್ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಡಾ.ವಿಜಯ ಸಿಂಗ್ಲ ವಿರುದ್ಧ ಶೇ.1 ಕಮಿಷನ್ ಆರೋಪ ಬಂತು ತಕ್ಷಣ ಅವರನ್ನು ವಜಾ ಮಾಡಲಾಯಿತು, ಪಂಜಾಬ್ ಮಂತ್ರಿ ಫೋಜಾ ಸಿಂಗ್ ಸರಾನಿ ವಿರುದ್ಧವೂ ಆರೋಪ ಬಂತು ಕೂಡಲೇ ಅವರನ್ನು ಕೈಬಿಡಲಾಗಿತ್ತು, ಅದನ್ನು ಇವರಿಂದ ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಆಪ್ ಮಾಡೆಲ್ ಕಾಪಿ ಒಳ್ಳೆಯ ರೀತಿ ಮಾಡಿ:ಬೇರೆ ಬೇರೆ ರೀತಿಯಲ್ಲಿ ಆಪ್ನ ದೆಹಲಿ ಮಾಡಲ್, ಪಂಜಾಬ್ ಮಾಡೆಲ್ ಅನ್ನು ಈಗ ಬೇರೆಯವರು ಕಾಪಿ ಪೇಸ್ಟ್ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ನವರು 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡಲಿದ್ದೇವೆ ಎನ್ನುತ್ತಿದ್ದಾರೆ. ಬಿಜೆಪಿಯವರು ನಾವು ಶಾಲೆ, ಆಸ್ಪತ್ರೆ ವಿಚಾರದಲ್ಲಿ ಅಭಿವೃದ್ದಿ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ. ಇಂದು ನೀವು ನಮ್ಮನ್ನು ಕಾಪಿ ಮಾಡುತ್ತಿದ್ದೀರಿ. ಆದರೆ ಕಾಪಿಯನ್ನು ಒಳ್ಳೆಯ ರೀತಿ ಮಾಡಿ. ನಾವು ಮಾಡಿದ ಗುಣಮಟ್ಟದಲ್ಲಿ ಯೋಜನೆಗಳನ್ನು ಮಾಡಿ, ಶಾಲೆ, ಆಸ್ಪತ್ರೆ ಮಾಡಿ, ವಿದ್ಯುತ್ ಉಚಿತವಾಗಿ ಕೊಡಿ, ಆಪ್ ಮಾದರಿಯಲ್ಲಿಯೇ ಮಾಡಿ. ಆಪ್ ಮಾದರಿ ಎಂದರೆ ಭ್ರಷ್ಟಾಚಾರ ರಹಿತ ಮಾದರಿ, ಭ್ರಷ್ಟಾಚಾರ ಮಾಡಿ ಫ್ರೀ ಕೊಟ್ಟರೆ ಹಣ ಉಳಿಯಲ್ಲ, ಹಣ ಸಾಕಾಗಲ್ಲ ಎಂದರು.
ಕಾಂಗ್ರೆಸ್ ಅಂತಾರಳ ಕೇಳಿಕೊಳ್ಳಬೇಕು:ಉಚಿತ ಯೋಜನೆ ಘೋಷಿಸುವ ಮೊದಲು ಅದು ಜಾರಿ ಸಾಧ್ಯವಾ ಎಂದು ಕಾಂಗ್ರೆಸ್ನವರು ತಮ್ಮ ಅಂತರಾಳವನ್ನು ಕೇಳಿಕೊಳ್ಳಬೇಕು ಎಂದು ಕಾಂಗ್ರೆಸ್ನ ಉಚಿತ ಯೋಜನೆಗಳ ಘೋಷಣೆ ಕುರಿತು ಬ್ರಿಜೇಷ್ ಕಾಳಪ್ಪ ಕಿಡಿಕಾರಿದರು. ಮುಂಬರಲಿರುವ ಚುನಾವಣೆಯಗೆ ಆಪ್ ಅಭ್ಯರ್ಥಿಯಾಗುವವರು ಯಾರು ಎನ್ನುವುದು ಅಭ್ಯರ್ಥಿ ಆಗುವವರಿಗೆ ಗೊತ್ತಿದೆ, ಸದ್ಯಲದ್ಲೇ ಪಟ್ಟಿ ಬಿಡುಗಡೆಯಾಗಲಿದೆ. ಚುನಾವಣೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಗುಜರಾತ್ ಮಾಡೆಲ್ ಲೇವಡಿ:ಕಾಂಗ್ರೆಸ್ನ ಕಿಮ್ಮನೆ ರತ್ನಾಕರ್ ಪ್ರಾಮಾಣಿಕರು ಅವರ ವಿರುದ್ಧ ಇಡಿ, ಸಿಬಿಐ ತನಿಖೆಯಾಗುತ್ತದೆ. ಬಾಡಿಗೆದಾರ ಏನೋ ಮಾಡಿದ್ದಕ್ಕೆ ಕಿಮ್ಮನೆ ನಿವಾಸದ ಮೇಲೆ ದಾಳಿಯಾಯಿತು. ಮುಂಬೈ ನಗರ ಪೊಲೀಸ್ ಆಯುಕ್ತರಾಗಿದ್ದ ಸತ್ಯಪಾಲ್ ಸಿಂಗ್ ಅವರು ರಾಜೀನಾಮೆ ಕೊಟ್ಟು ಬಿಜೆಪಿ ಸೇರಿ ಸಂಸದರಾದರು. ಅವರ ಕೊಟ್ಟ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ನಡೆದು ಎಲ್ಲವೂ ಬಹಿರಂಗವಾಯಿತು. ಆದರೆ ಸತ್ಯಪಾಲ್ ಸಿಂಗ್ ಅವರ ಮೇಲೆ ಯಾಕೆ ದಾಳಿ ಆಗಲಿಲ್ಲ. ಇದು ಗುಜರಾತ್ ಮಾಡೆಲ್. ಗುಜರಾತ್ ಮಾಡೆಲ್ನಲ್ಲಿ ಎರಡೇ ಆಯ್ಕೆ ಇರಲಿದೆ. ಒಂದು ಬಿಜೆಪಿ ಪರವಾಗಿ ನಿಂತರೆ ರೆಡ್ ಕಾರ್ಪೆಟ್ ಟ್ರೀಟ್ಮೆಂಟ್, ವಿರುದ್ಧವಾಗಿ ನಿಂತರೆ ಒದೆ ಎಂದು ಟೀಕಿಸಿದರು.
ಇದನ್ನೂ ಓದಿ:ಬಿಜೆಪಿಯ ಶಾಸಕರಲ್ಲೇ ಕೆಸರೆರಚಾಟ ಆರಂಭ: ಹೆಚ್.ಡಿ.ಕುಮಾರಸ್ವಾಮಿ