ಬೆಂಗಳೂರು: ನಾನು ಚಹಾ ಮಾರಿದ್ದೇನೆ ನೀವು ಪಕೋಡಾ ಮಾರಾಟ ಮಾಡಿ ಎನ್ನುವವರಿದ್ದಾಗ ಇನ್ನೇನಾಗಲು ಸಾಧ್ಯ ಎನ್ನುವ ಕಾಂಗ್ರೆಸ್ ಟ್ವೀಟ್ಗೆ ಬಿಜೆಪಿ ಇಂದಿರಾ, ನೆಹರೂ ಮಾಡಿದ್ದೇನು ಎಂದು ಪ್ರಶ್ನಿಸುವ ಮೂಲಕ ಸರಣಿ ಟ್ವೀಟ್ ಮಾಡಿ ತಿರುಗೇಟು ನೀಡಿದೆ.
ಹೌದು, ನಮ್ಮ ಪ್ರಧಾನಿ ಚಹಾ ಮಾರಿದ್ದಾರೆ! ಆದರೆ, ಇಂದಿರಾ ಮಾಡಿದ್ದೇನು!? ಗರೀಬಿ ಹಠಾವೋ ಘೋಷಣೆ ಕೂಗಿ ಗಾಂಧಿ ಕುಟುಂಬದ ಬಡತನ ನೀಗಿಸಿಕೊಂಡರು. ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಸಂವಿಧಾನಕ್ಕೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನಿಸಿದರು ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಕಲ್ಯಾಣ ಕರ್ನಾಟಕದ ವೈರಿ ಕಾಂಗ್ರೆಸ್:
ಕಲ್ಯಾಣ ಕರ್ನಾಟಕ ಏಕೆ ಅಭಿವೃದ್ಧಿ ಕಂಡಿಲ್ಲ ಎಂಬ ಕಾಂಗ್ರೆಸ್ ಪ್ರಶ್ನೆಗೂ ಮಲ್ಲಿಕಾರ್ಜುನ ಖರ್ಗೆ ಅವರ ಸಂಪತ್ತಿನ ವೃದ್ಧಿಗೂ ಸಂಬಂಧವಿದೆ. ಖರ್ಗೆ ಆಸ್ತಿಯ ಬಗ್ಗೆ ಕಾಂಗ್ರೆಸ್ ಮೊದಲು ಪ್ರಶ್ನೆ ಮಾಡಬೇಕು. ಆಗ ಈ ಜಿಲ್ಲೆಗಳು ಹಿಂದುಳಿದಿರುವುದಕ್ಕೆ ಉತ್ತರ ಸಿಗುತ್ತದೆ. ಕಲ್ಯಾಣ ಕರ್ನಾಟಕದ ನಿಜವಾದ ವೈರಿಯೇ ಕಾಂಗ್ರೆಸ್ ಎಂದು ಟ್ವೀಟ್ ಮೂಲಕ ಬಿಜೆಪಿ ಟಾಂಗ್ ನೀಡಿದೆ.
ಓದಿ:ಆನ್ಲೈನ್ ಶಿಕ್ಷಣದಿಂದ ಕಣ್ಣುಗಳ ಮೇಲೆ ದುಷ್ಪರಿಣಾಮ: ತಜ್ಞರ ವರದಿ ಪಾಲನೆಗೆ ಬದ್ಧವೆಂದ ಸುರೇಶ್ ಕುಮಾರ್
ಕಲ್ಯಾಣ ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಇಷ್ಟು ವರ್ಷ ಊದಿದ್ದು ಕೇವಲ ತುತ್ತೂರಿ ಮಾತ್ರ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಮೂಲಕ ರೂ. 1,500 ಕೋಟಿ ಅನುದಾನ ಒದಗಿಸಿದ್ದು ಬಿಜೆಪಿ ಸರ್ಕಾರ. ಕಲ್ಯಾಣ ಕರ್ನಾಟಕಕ್ಕೆ ಕಾಂಗ್ರೆಸ್ ಕೊಡುಗೆ ಏನು ಎಂದು ಪ್ರಶ್ನಿಸಿದೆ.