ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮೋಡಿ ಮಾಡಲು ಮೋದಿ ಆಗಮಿಸುತ್ತಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾದರೆ ಮೋದಿ ಭದ್ರತೆಯಿಂದಾಗಿ ಸಂಚಾರ ಸಮಸ್ಯೆಗೆ ಸಿಲುಕಿ ಜನರು ಹೈರಾಣಾಗಿ ಪೊಲೀಸರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಮೋದಿ ವಿರುದ್ಧವೂ ಕಿಡಿ ಕಾರುತ್ತಿರುವ ಘಟನೆ ರೋಡ್ ಶೋ ನಡೆಯುವ ಪ್ರದೇಶದ ವ್ಯಾಪ್ತಿಯಲ್ಲಿ ಕಂಡುಬಂದಿದೆ.
ನಗರದ ತುಮಕೂರು ರಸ್ತೆಯಲ್ಲಿರುವ ನೈಸ್ ಜಂಕ್ಷನ್ನಿಂದ ಹೊರವರ್ತುಲ ರಸ್ತೆಯಲ್ಲಿರುವ ಸುಮನಹಳ್ಳಿ ಸರ್ಕಲ್ವರೆಗೂ ಇಂದು ಸಂಜೆ 6.15 ರಿಂದ 7 ಗಂಟೆವರೆಗೂ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಲಿದ್ದಾರೆ. ಮೋದಿ ರೋಡ್ ಶೋ ಭದ್ರತೆಗಾಗಿ ಕಳೆದ ದಿನವೇ ಎಸ್.ಪಿ.ಜಿ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ರೋಡ್ ಶೋಗೆ ಗ್ರೀನ್ ಸಿಗ್ನಲ್ ನೀಡಿ ಭದ್ರತಾ ವ್ಯವಸ್ಥೆಗೆ ಪೊಲೀಸ್ ಇಲಾಖೆಗೆ ಕೆಲವೊಂದು ಸಲಹೆ ಸೂಚನೆ ಕೊಟ್ಟಿದೆ. ಹೀಗಾಗಿ ಪೊಲೀಸರು ಬೆಳಗ್ಗೆಯಿಂದಲೇ ರೋಡ್ ಶೋ ನಡೆಯುವ ಮಾರ್ಗದಲ್ಲಿ ಭದ್ರತೆ ಕಲ್ಪಿಸಿದ್ದು, ಸಂಚಾರ ವ್ಯವಸ್ಥೆಯನ್ನು ಹಂತ ಹಂತವಾಗಿ ಮಧ್ಯಾಹ್ನದ ಹೊತ್ತಿಗೆ ಸಂಪೂರ್ಣವಾಗಿ ನಿರ್ಬಂಧಿಸಿದ್ದಾರೆ. ಇದರಿಂದಾಗಿ ಸ್ಥಳೀಯರ ಸಂಚಾರಕ್ಕೆ ಅಡೆತಡೆ ಉಂಟಾಗಿದ್ದು, ಜನರು ಹೈರಾಣಾಗಿದ್ದಾರೆ.
ನೈಸ್ ರೋಡ್ನಿಂದ ಸುಮನಹಳ್ಳಿಯವರೆಗೂ ರೋಡ್ ಬ್ಲಾಕ್ ಮಾಡಿದ್ದರಿಂದ ತಮ್ಮ ತಮ್ಮ ಮನೆಗೆ ತೆರಳಲು ಸಾರ್ವಜನಿಕರು ಪರದಾಡಬೇಕಾಯಿತು. ಬಸ್ಗಳು ದೂರದ ಸ್ಥಳದಲ್ಲೇ ನಿಲ್ಲುತ್ತಿದ್ದು, ಆಟೋಗಳ ಸಂಚಾರಕ್ಕೂ ಅವಕಾಶ ನಿರ್ಬಂಧಿಸಲಾಗಿದೆ. ಹೀಗಾಗಿ ಪ್ರಯಾಣಿಕರು ಕಾಲ್ನಡಿಗೆಯಲ್ಲೇ ಸಂಚರಿಸಬೇಕಿದೆ. ದ್ವಿಚಕ್ರ ವಾಹನಗಳಿಗೂ ನೋ ಎಂಟ್ರಿ ಎನ್ನಲಾಗುತ್ತಿದೆ. ಹೀಗಾಗಿ ಮೋದಿ ರೋಡ್ ಶೋ ನಡೆಯುವ ಮಾರ್ಗದ ವ್ಯಾಪ್ತಿಯಲ್ಲಿನ ಸುತ್ತಮುತ್ತಲ ಪ್ರದೇಶಕ್ಕೆ ತೆರಳಲು ಜನರು ಪ್ರಯಾಸ ಪಡಬೇಕಾಗಿದ್ದು, ಪೊಲೀಸರಿಗೆ ಹಾಗೂ ಮೋದಿಗೆ ಹಿಡಿಶಾಪ ಹಾಕುತ್ತಿದ್ದಾರೆ.