ಬೆಂಗಳೂರು:ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಸದನದಲ್ಲಿ ಮಾಡಿದ ವಿದಾಯದ ಭಾಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಒಬ್ಬ ಕಾರ್ಯಕರ್ತನಾದ ನನಗೆ ಈ ಭಾಷಣ ಅತ್ಯಂತ ಸ್ಫೂರ್ತಿದಾಯಕ ಎಂದೆನಿಸಿದೆ. ಇದರಲ್ಲಿ ನಮ್ಮ ಪಕ್ಷದ ನೈತಿಕತೆಯೂ ಅಡಕವಾಗಿದೆ. ಇದು ಖಂಡಿತವಾಗಿಯೂ ಇತರ ಕಾರ್ಯಕರ್ತರಿಗೂ ಸ್ಫೂರ್ತಿ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಟ್ವೀಟ್ ಮಾಡಿದ್ದಾರೆ.
ಯಡಿಯೂರಪ್ಪ ಸದನದಲ್ಲಿ ಇದೇ ನನ್ನ ಕಡೆಯ ಭಾಷಣ ಮತ್ತೆ ಇಲ್ಲಿಗೆ ಬರುವುದಿಲ್ಲ, ಚುನಾವಣೆಗೆ ನಿಲ್ಲುವುದಿಲ್ಲ. ಆದರೆ, ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ, ಎಲ್ಲ ಕಡೆ ಪ್ರವಾಸಕ್ಕೆ ಬರುತ್ತೇನೆ, ಯಾರು ಕರೆದರೂ ನಿಮ್ಮ ಕ್ಷೇತ್ರಕ್ಕೆ ಬರುತ್ತೇನೆ ಎಂದು ಭಾಷಣ ಮಾಡಿದ್ದ ತುಣುಕನ್ನು ರಾಜ್ಯ ಬಿಜೆಪಿ ಘಟಕ ಟ್ವೀಟ್ ಮೂಲಕ ಹಂಚಿಕೊಂಡಿತ್ತು, ಇದನ್ನು ರೀಟ್ವೀಟ್ ಮಾಡಿರುವ ಮೋದಿ ಯಡಿಯೂರಪ್ಪ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪ ಅವರ ಮನದಾಳದ ಮಾತೇನು?:ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಬಿಎಸ್ವೈ ಅತ್ಯಂತ ಭಾವುಕತೆಯಿಂದ ಚುನಾವಣೆ ಪಕ್ಷ, ವಿಪಕ್ಷದ ಕುರಿತಾಗಿ ವಿದಾಯದ ಭಾಷಣ ಮಾಡಿದ್ದರು. ‘‘ಇದು ನನಗೆ ಕೊನೆಯ ಅಧಿವೇಶನ, ನಾನು ಮುಂದಿನ ಅಧಿವೇಶನಕ್ಕೆ ಬರುವುದಿಲ್ಲ. ಏಕೆಂದರೆ ನಾನು ತಿಳಿಸಿದಂತೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಹಾಗಾಗಿ ನಾನು ಮುಂದಿನ ಅಧಿವೇಶನಕ್ಕೆ ಬರುವುದಿಲ್ಲ. ನಾನು ಎಲ್ಲಿಯೂ ಮಧ್ಯದಲ್ಲಿ ಮಾತನಾಡಲಿಲ್ಲ. ಆದರೆ, ಈಗ ಕೊನೆದಾಗಿ ವಿದಾಯದ ಭಾಷಣ ಮಾಡುತ್ತಿರುವೆ ಎಂದಿದ್ದರು.
ಮುಂದುವರಿದು, ವಿರೋಧ ಪಕ್ಷದವರು, ಬಿಜೆಪಿ ಯಡಿಯೂರಪ್ಪ ಅವರಿಗೆ ಅನ್ಯಾಯ ಮಾಡಿದೆ, ಅವರನನ್ನು ಕಡೆಗಣಿಸಿದೆ ಎಂದೆಲ್ಲ ಅಂದಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿಯವರಾಗಲಿ, ಬಿಜೆಪಿ ಪಕ್ಷದವರಾಗಲಿ ಎಂದೂ ನನ್ನನ್ನು ಕಡೆಗಣಿಸಲಿಲ್ಲ. ನನಗೆ ಪಕ್ಷ ಉತ್ತಮ ಅವಕಾಶಗಳನ್ನು ನೀಡಿದೆ. ಇದೇ ಅವಕಾಶದಿಂದ ನನ್ನ ರಾಜಕೀಯ ಜೀವನದಲ್ಲಿ 4 ಬಾರಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದೇನೆ, ಪ್ರಮಾಣವಚನ ಸ್ವೀಕರಿಸಿದ್ದೇನೆ. ನನಗೆ ಸಿಕ್ಕಿದಷ್ಟು ಅವಕಾಶ ಬೇರೆ ಯಾರಿಗೂ ದೊರಕಿಲ್ಲ ಎಂದಿದ್ದರು.
ಹಾಗೆ ಚುನಾವಣೆಗೆ ಸಂಬಂಧಿಸಿ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಹಾಗಂತ ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ. ನರೇಂದ್ರ ಮೋದಿಯವರು ನನಗೆ ಕೊಟ್ಟ ಗೌರವ ಸ್ಥಾನಮಾನಕ್ಕೆ ನನ್ನ ಕೊನೆ ಉಸಿರು ಇರುವವರೆಗೂ ಬಿಜೆಪಿ ಕಟ್ಟಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ. ಈ ಚುನಾವಣೆಯಲ್ಲದೇ ದೇವರು ನನಗೆ ಇನ್ನೂ ಶಕ್ತಿ ಆರೋಗ್ಯ ಕೊಟ್ಟರೆ 5 ವರ್ಷ ನಂತರ ಚುನಾವಣೆಗೂ ಕಾರ್ಯನಿರ್ವಹಿಸುವೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇನೆ ಎಂದು ತಮ್ಮ ಪಕ್ಷದ ಕುರಿತಾಗಿ ಬೆಂಬಲವಾಗಿ ಮಾತನಾಡಿದ್ದರು. ಅಲ್ಲದೆ, ಈ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ಖಂಡಿತಾ ಹಾಗೇ ಕಾಂಗ್ರೆಸ್ನವರು ಅದೇ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವುದು ನಿಶ್ಚಿತ ಎಂದಿದ್ದರು.
ಶಿವಮೊಗ್ಗ ಏರ್ಪೋರ್ಟ್ ವಿಡಿಯೋಗೆ ರೀಟ್ವೀಟ್ ಮಾಡಿದ ಮೋದಿ: ಶಿವಮೊಗ್ಗದಲ್ಲಿ ಉದ್ಘಾಟನೆ ಸಿದ್ಧವಾಗಿರುವ ವಿಮಾನ ನಿಲ್ದಾಣದ ಸುಂದರ ವಿಡಿಯೋವನ್ನು ಬಿವೈ ರಾಘವೇಂದ್ರ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅದಕ್ಕೆ ‘‘ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣದ ಕನಸು ನನಸಾಗುತ್ತಿದೆ. ಶಿವಮೊಗ್ಗ ವಿಮಾನ ನಿಲ್ದಾಣವು ಕೇವಲ ವಿಮಾನ ನಿಲ್ದಾಣವಲ್ಲ, ಮಲ್ನಾಡ್ ಪ್ರದೇಶದ ರೂಪಾಂತರದ ಪ್ರಯಾಣದ ಗೇಟ್‌ವೇ ಆಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳಲಿದೆ ಎಂದು ಬರೆದು ಹಾಕಿಕೊಂಡಿದ್ದರು. ಇದಕ್ಕೆ ಪ್ರಧಾನಿ ಮೋದಿ ರೀಟ್ವೀಟ್ ಮಾಡಿ ತಮ್ಮ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಲ್ಲದೇ ಶಿವಮೊಗ್ಗದಲ್ಲಿನ ವಿಮಾನ ನಿಲ್ದಾಣವು ವಾಣಿಜ್ಯ, ಸಂಪರ್ಕವನ್ನು ಮತ್ತು ಪ್ರವಾಸೋದ್ಯಮವನ್ನು ಹೆಚ್ಚಿಸುತ್ತದೆ ಎಂದು ಬರೆದಿದ್ದಾರೆ.
ಇದನ್ನೂ ಓದಿ:ನಾನು ಚುನಾವಣೆಗೆ ನಿಲ್ಲೋದಿಲ್ಲ, ಮತ್ತೆ ಸದನಕ್ಕೆ ಬರೋದಿಲ್ಲ: ಭಾವುಕರಾಗಿ ನುಡಿದ ಬಿಎಸ್ವೈ