ಬೆಂಗಳೂರು: 4,249 ಕೋಟಿ ವೆಚ್ಚದ 13.71 ಕಿಲೋಮೀಟರ್ ಉದ್ದದ ನೂತಮ ಮೆಟ್ರೋ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಕೃಷ್ಣರಾಜಪುರದಿಂದ ವೈಟ್ ಫೀಲ್ಡ್ ವರೆಗಿನ ಮಾರ್ಗದ ನಮ್ಮ ಮೆಟ್ರೋಗೆ ಹಸಿರು ನಿಶಾನೆ ತೋರುವ ಜೊತೆಗೆ ಮೆಟ್ರೋ ರೈಲಿನಲ್ಲಿ ಸಂಚರಿಸಿದರು. ಇಂದಿನ ನೂತನ ಮಾರ್ಗದಿಂದಾಗಿ ದೇಶದಲ್ಲೇ ಎರಡನೇ ಅತಿ ದೊಡ್ಡ ಮೆಟ್ರೋ ಜಾಲ ಹೊಂದಿದ ಮೆಟ್ರೋ ಆಗಿ ನಮ್ಮ ಮೆಟ್ರೋ ಹೆಗ್ಗಳಿಕೆ ಪಡೆದುಕೊಂಡಂತಾಗಿದೆ.
ನಗರದ ವೈಟ್ ಫೀಲ್ಡ್ನಲ್ಲಿ ನಮ್ಮ ಮೆಟ್ರೋದ ನೂತನ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಗ್ರೀನ್ ಸಿಗ್ನಲ್ ನೀಡಿದರು. ನಂತರ ವೈಟ್ ಫೀಲ್ಡ್ನಿಂದ ಕೃಷ್ಣರಾಜುಪುರ ನಿಲ್ದಾಣದವರೆಗೂ ನಮ್ಮ ಮೆಟ್ರೋ ರೈಲಿನಲ್ಲಿಯೇ ಪ್ರಧಾನಿ ಮೋದಿ ಸಂಚರಿಸಿದರು. ಈ ವೇಳೆ ಮೆಟ್ರೋ ಕಾರ್ಮಿಕರು, ಸಿಬ್ಬಂದಿ ಜೊತೆ ರೈಲಿನಲ್ಲಿಯೇ ಸಂವಾದವನ್ನೂ ನಡೆಸಿದರು.
ನಿರ್ಮಾಣ ಹಂತದಲ್ಲಿರುವ 15.81 ಕಿಲೋಮೀಟರ್ ವಿಸ್ತರಣೆಯಲ್ಲಿ 13.71 ಕಿಲೋಮೀಟರ್ ಭಾಗ ಮಾತ್ರ ಇಂದು ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಈ ನೂತನ ಮಾರ್ಗದ ವಿಭಾಗವು ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ ನಿಲ್ದಾಣದವರೆಗೆ ಕಾರ್ಯಾಚರಣೆಯಲ್ಲಿರುವ ಪೂರ್ವ-ಪಶ್ಚಿಮ ಕಾರಿಡಾರ್ನ ಪರ್ಪಲ್ ಲೈನ್ ಪೂರ್ವ ವಿಸ್ತರಣೆಯಾಗಿದೆ.
ಕೃಷ್ಣರಾಜಪುರ, ಸಿಂಗಯ್ಯನಪಾಳ್ಯ, ಗರುಡಾಚಾರ್ ಪಾಳ್ಯ, ಹೂಡಿ, ಸೀತಾರಾಮಪಾಳ್ಯ, ಕುಂದಲಹಳ್ಳಿ, ನಲ್ಲೂರು ಹಳ್ಳಿ, ಶ್ರೀ ಸತ್ಯಸಾಯಿ ಆಸ್ಪತ್ರೆ, ಪಟ್ಟಂದೂರು ಅಗ್ರಹಾರ, ಕಾಡುಗೋಡಿ ಟ್ರೀ ಪಾರ್ಕ್, ಹೋಪ್ ಫಾರ್ಮ್ ಚನ್ನಸಂದ್ರ, ವೈಟ್ ಫೀಲ್ಡ್ (ಕಾಡುಗೋಡು) ಸೇರಿ ಒಟ್ಟು 12 ನಿಲ್ದಾಣಗಳು ಈ ಮಾರ್ಗದಲ್ಲಿ ಬರಲಿವೆ.
ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಪ್ರಧಾನಿ ಮೋದಿ
ಎರಡನೇ ಅತಿ ದೊಡ್ಡ ಮೆಟ್ರೋ:ದೇಶದಲ್ಲಿಯೇ ದೆಹಲಿ ಮೊಟ್ರೋ ಅತಿ ದೊಡ್ಡ ಮೆಟ್ರೋ ಜಾಲ ಹೊಂದಿರುವ ಮೆಟ್ರೋ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದೆ. ಎರಡನೇ ಸ್ಥಾನದಲ್ಲಿ ಹೈದರಾಬಾದ್ ಮೆಟ್ರೋ ಇತ್ತು. ಆದರೆ ಇಂದು ಹೊಸ ಮಾರ್ಗ ಉದ್ಘಾಟನೆ ಮೂಲಕ ಹೈದರಾಬಾದ್ ಅನ್ನು ಹಿಂದಿಕ್ಕಿ ಬೆಂಗಳೂರಿನ ನಮ್ಮ ಮೆಟ್ರೋ ಎರಡನೇ ಸ್ಥಾನಕ್ಕೆ ಜಿಗಿದಿದೆ. ಇಂದಿನಿಂದ ನಮ್ಮ ಮೆಟ್ರೋ ದೇಶದ ಎರಡನೇ ಅತಿ ದೊಡ್ಡ ಮೆಟ್ರೋ ಜಾಲ ಹೊಂದಿದ ನಗರವಾದಂತಾಗಿದೆ. ಇಂದಿನ 13.71 ಕಿಲೋಮೀಟರ್ ಮಾರ್ಗ ಸೇರಿ ಒಟ್ಟು 69.66 ಕಿಲೋಮೀಟರ್ ಮೆಟ್ರೋ ಜಾಲವನ್ನು ನಮ್ಮ ಮೆಟ್ರೊ ಹೊಂದಿದಂತಾಗಲಿದೆ.
ಏಳನೇ ಬಾರಿ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಪ್ರಧಾನಿ ಮೋದಿ: ರಾಜ್ಯಕ್ಕೆ ಒಂದು ದಿನದ ಭೇಟಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ನೇರವಾಗಿ ಚಿಕ್ಕಬಳ್ಳಾಪುರಕ್ಕೆ ತೆರಳಿದ್ದರು. ಅಲ್ಲಿ ನೂತನವಾಗಿ ನಿರ್ಮಾಣಗೊಂಡ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ಉದ್ಘಾಟಿಸಿದ್ದಾರೆ.
ಈ ವರ್ಷ ಇದು ಏಳನೇ ಬಾರಿ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದು, ಯಾವುದೇ ರಾಜಕೀಯ ಭಾಷಣ ಮಾಡದೆ, ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನಷ್ಟೇ ಮಾತನಾಡಿದ್ದಾರೆ. ಮೆಟ್ರೋ ಲೈನ್ಗೆ ಚಾಲನೆ ನೀಡಿದ ನಂತರ, ಅಲ್ಲಿಂದ ನೇರವಾಗಿ ದಾವಣಗೆರೆಯಲ್ಲಿ ನಡೆಯುತ್ತಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭ ಮಹಾಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದಾರೆ.
ಇದನ್ನೂ ಓದಿ:ಕನ್ನಡ ದೇಶದ ಗೌರವ ಹೆಚ್ಚಿಸುವ ಭಾಷೆ: ಪ್ರಧಾನಿ ಮೋದಿ ಬಣ್ಣನೆ