ಬೆಂಗಳೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರತಿ ರಾಜ್ಯಗಳಲ್ಲಿ ಅದರದೇ ಆದ ಹೆಮ್ಮೆಯ ಸಂಸ್ಥೆಗಳನ್ನು ನಾಶ ಮಾಡಲು ಮುಂದಾಗುತ್ತಿದೆ ಎಂದು ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಆರೋಪಿಸಿದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದಕ್ಕೆ ಸೂಕ್ತ ಉದಾಹರಣೆಯೇ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ನಂದಿನಿ ಸಂಸ್ಥೆಯ ವಿರುದ್ಧದ ದಾಳಿ. ನಂದಿನಿ ಉತ್ಪನ್ನಗಳಲ್ಲಿ ಯಾವ ದೋಷವಿದೆ? ಈ ಉತ್ಪನ್ನಗಳ ಮೇಲೆ ಕನ್ನಡ ಭಾಷೆ ಬಳಸಲಾಗಿದೆ ಎಂಬುದು ನಿಮ್ಮ ಸಮಸ್ಯೆಯೇ ಎಂದು ಪ್ರಶ್ನಿಸಿದರು.
ಮೋದಿ ಹಾಗೂ ಅಮಿತ್ ಶಾ ಅವರು ನಂದಿನಿ ಉತ್ಪನ್ನದ ರುಚಿ ನೋಡಬೇಕು. ಇದು ಕರ್ನಾಟಕದ ಹೆಮ್ಮೆ. ಆರೂವರೆ ಕೋಟಿ ಜನರ ನಂದಿನಿಯನ್ನೂ ಯಾಕೆ ತುಳಿಯಲು ಹೊರಟಿದ್ದೀರಿ? ಇದರಿಂದ ಏನು ಸಾಧಿಸಲು ಹೊರಟಿದ್ದೀರಿ? ಅಮಿತ್ ಶಾ ಅವರೇ ಸಹಕಾರಿ ಸಚಿವಾಲಯದ ಮೂಲ ಉದ್ದೇಶವೇನು? ನೀವು ಸಹಕಾರ ಕ್ಷೇತ್ರದಲ್ಲೂ ಸ್ಪರ್ಧೆ ತರಲು ಹೊರಟಿದ್ದೀರಿ. ಉದ್ದೇಶಪೂರ್ವಕವಾಗಿ ಇದನ್ನು ಯಾಕೆ ಮಾಡುತ್ತಿದ್ದೀರಿ. ನಂದಿನಿ ಆಶ್ರಯದಲ್ಲಿ ಸುಮಾರು 2 ಕೋಟಿ ಜನರು ಆಶ್ರಯ ಪಡೆದಿದ್ದಾರೆ ಎಂದರು.