ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಹಂತದ ಮತ ಪ್ರಚಾರಕ್ಕೆ ಸಜ್ಜಾಗಿದೆ. ಇಂದು ಮತ್ತು ನಾಳೆ ಮೋದಿ ರಾಜ್ಯದ ವಿವಿಧೆಡೆ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಪ್ರಧಾನಿಯವರು 2ನೇ ಹಂತದ ಪ್ರಚಾರದಲ್ಲಿ ಇಂದು (ಮಂಗಳವಾರ) ಚಿತ್ರದುರ್ಗ, ಹೊಸಪೇಟೆ, ಸಿಂಧನೂರು, ಕಲಬುರಗಿಯಲ್ಲಿ ರೋಡ್ ಶೋ ಮತ್ತು ಸಮಾವೇಶ ನಡೆಸಿದರೆ, ಬುಧವಾರದಂದು ಮೂಡಬಿದಿರೆ, ಅಂಕೋಲ ಹಾಗೂ ಬೈಲಹೊಂಗಲದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವರು.
ಇಂದು ಎಲ್ಲೆಲ್ಲಿ ಮೋದಿ ಮತಬೇಟೆ?: ಇಂದು ಬೆಳಗ್ಗೆ 11 ಗಂಟೆಗೆ ಚಿತ್ರದುರ್ಗದಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಅಲ್ಲಿಂದ ತೆರಳಿ ವಿಜಯನಗರ ಜಿಲ್ಲಾ ಕೇಂದ್ರವಾದ ಹೊಸಪೇಟೆಯಲ್ಲಿ ಮತ್ತೊಂದು ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವರು.
ಸಂಜೆ 4 ಗಂಟೆಗೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸಂಜೆ 6.30 ಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆ ಕಲಬುರಗಿಯಲ್ಲಿ ರೋಡ್ ಶೋ ಮಾಡಲಿದ್ದಾರೆ. ಅಲ್ಲಿಯೇ ಉಳಿದುಕೊಳ್ಳುವ ಪ್ರಧಾನಿ, ಮರುದಿನ ಬುಧವಾರ ಅಲ್ಲಿಂದ ಮಂಗಳೂರಿಗೆ ಆಗಮಿಸಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ, ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಮತ್ತು ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳುವರು ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ.
ಹಳೇ ಮೈಸೂರು ಭಾಗದಲ್ಲಿ ಪ್ರಚಾರ:ಜೆಡಿಎಸ್ ಪ್ರಾಬಲ್ಯವಿರುವ ಈ ಭಾಗದ ಹಲವು ಜಿಲ್ಲೆಗಳಲ್ಲಿ ಮೊದಲ ಹಂತದ ಪ್ರಚಾರದಲ್ಲಿ ಪ್ರಧಾನಿ ಮೋದಿ ಈಗಾಗಲೇ ಭರ್ಜರಿ ಪ್ರಚಾರ ನಡೆಸಿದ್ದಾರೆ. ಏಪ್ರಿಲ್ 29 ಮತ್ತು 30 ರಂದು ಮೈಸೂರು, ಚನ್ನಪಟ್ಟಣ, ಹಾಸನ, ಕೋಲಾರ, ಬೆಂಗಳೂರಿನಲ್ಲಿ ರೋಡ್ ಶೋ ನಡೆಸಿ ಜನರನ್ನು ಆಕರ್ಷಿಸಿದ್ದಾರೆ.