ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅಧಿಕಾರದ ರಾಜಕಾರಣ ಮಾಡದೆ ಜನರ ರಾಜಕಾರಣ ಮಾಡಿದ್ದರಿಂದ ದೇಶದ ಇತಿಹಾಸ, ಚರಿತ್ರೆ ಮತ್ತು ದೇಶದ ಭವಿಷ್ಯದಲ್ಲಿ ಸದಾಕಾಲ ಚಿರಸ್ಮರಣೀಯರಾಗಿ ಇರಲಿದ್ದಾರೆ. ಹತ್ತಿರ ಇದ್ದವರಿಗೆ ಮೋದಿ ಬಡವರ ಬಗ್ಗೆ ಮಿಡಿಯುವ ಹೃದಯವಂತಿಕೆಯ ವ್ಯಕ್ತಿಯಾಗಿ ಕಂಡರೆ, ದೂರ ಇದ್ದವರಿಗೆ ಆಶ್ರಯದಾತ, ಅಣ್ಣ, ತಂದೆ, ಭರವಸೆ ಮತ್ತು ಅಪ್ಪಟ ದೇಶಾಭಿಮಾನಿಯಾಗಿ ಕಾಣುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸೇವೆಯೇ ಜೀವನದ ಗುರಿ: ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ, ಮೋದಿ@20 ಕೃತಿಯನ್ನು ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿದ ಅವರು, ಮೋದಿ ಬಾಲ್ಯವನ್ನು ಕಷ್ಟದಲ್ಲಿ ಕಳೆದಿದ್ದಾರೆ. ಚಹಾ ಮಾರಾಟ ಮಾಡುತ್ತಾ ಅಪಮಾನ, ನೋವು ಅನುಭವಿಸಿರುವ ವ್ಯಕ್ತಿ ಮೋದಿ. ಅದೆಲ್ಲದರ ನಡುವೆ ತತ್ವ, ಆದರ್ಶ ಬೆಳೆಸಿಕೊಂಡು, ರಾಮಕೃಷ್ಣ ಪರಮಹಂಸ, ವಿವೇಕಾನಂದರ ತತ್ವವನ್ನು ಜೀವನದಲ್ಲಿ ಅಳವಡಿಸೊಕೊಂಡಿರುವ ಆರ್ಎಸ್ಎಸ್ ನಿಷ್ಠಾವಂತ ಪ್ರಚಾರಕ. ಎರಡು ವರ್ಷ ಹಿಮಾಲಯದಲ್ಲಿ ಕುಳಿತು ಎಲ್ಲವನ್ನು ತಿಳಿಯುವ ಪ್ರಯತ್ನ ಮಾಡಿದರು. ಅಧಿಕಾರ ಇರಲಿ ಇಲ್ಲದೇ ಇರಲಿ, ಸೇವೆಯೇ ಜೀವನದ ಗುರಿ ಎಂದು ಹೊರಟರು ಎಂದರು.
ಬಡತನ ದೂರ ಮಾಡಿದ ಮೋದಿ:ಸ್ಥಾನಮಾನಕ್ಕೆ ಎಲ್ಲರೂ ಹಂಬಲಿಸುತ್ತಾರೆ. ಯಾವುದು ಇರುವುದಿಲ್ಲವೋ ಅದರ ಬಯಕೆ ಎಲ್ಲರಲ್ಲಿಯೂ ಇರಲಿದೆ. ಆದರೆ ಮೋದಿ ಗುಜರಾತ್ ಸಿಎಂ ಆಗಿ ಯಾರೂ ಹಸಿವಿನಿಂದ ಬಳಲಬಾರದು ಎಂದು ಕೆಲಸ ಮಾಡಿದರು. ಬಡತನ ದೂರ ಮಾಡಿದ ಧೀಮಂತ ನಾಯಕರಾದರು. ತಮ್ಮ ರೀತಿ ಸಮಾಜದಲ್ಲಿ ಯಾರಿಗೂ ಅಪಮಾನ ಆಗಬಾರದು ಎಂದು ಸರ್ವರಿಗೂ ಸಮಪಾಲು, ಸಮಬಾಳು ಪಾಲಿಸಿ ಕಾರ್ಯಕ್ರಮ ರೂಪಿಸಿ ಸಮಾನತೆಯ ಅವಕಾಶಗಳನ್ನು ಮಾಡಿಕೊಟ್ಟಿದ್ದಾರೆ. ಅವರೊಬ್ಬ ಮಾನವೀಯ ಗುಣ ಹೊಂದಿದ ನಾಯಕರಾಗಿದ್ದಾರೆ ಎಂದು ಸಿಎಂ ಬಣ್ಣಿಸಿದರು.
ಪೀಪಲ್ ರಾಜಕಾರಣ ಮಾಡಿದ್ದ ಮೋದಿ:ತನಗಾಗಿ ಬದುಕುವುದು ಸಹಜ. ಆದರೆ ಇತರರಿಗಾಗಿ ಬದುಕುವುದು ದೊಡ್ಡ ಗುಣ. ಅಂತಹ ವ್ಯಕ್ತಿ ಮೋದಿ. ಅಧಿಕಾರಕ್ಕೆ ಬಂದ ನಂತರ ಮತ್ತು ಅಧಿಕಾರಕ್ಕೆ ಬರುವ ಮೊದಲು ಮೋದಿ ವಿಚಾರಧಾರೆ, ಆದರ್ಶದಲ್ಲಿ ಯಾವುದೂ ಬದಲಾಗಿಲ್ಲ. ಎರಡು ರೀತಿಯ ರಾಜಕಾರಣ ಇದೆ. ಮೊದಲನೆಯದು ಪವರ್ ಪಾಲಿಟಿಕ್ಸ್, ಅಧಿಕಾರ ಪಡೆಯಲು ಮತ್ತು ಉಳಿಸಿಕೊಳ್ಳಲು ಹೋರಾಟ ಮಾಡುವ ರಾಜಕಾರಣ ಎರಡನೇಯದ್ದು. ಪೀಪಲ್ ಪಾಲಿಟಿಕ್ಸ್, ಜನರಿಗಾಗಿ ಹೋರಾಟ ಮಾಡುವುದಾಗಿದೆ. ಮೋದಿ ಅಧಿಕಾರದ ರಾಜಕಾರಣ ಮಾಡದೆ ಜನರ ರಾಜಕಾರಣ ಮಾಡಿದ್ದರಿಂದ ದೇಶದ ಇತಿಹಾಸ, ಚರಿತ್ರೆ ಮತ್ತು ದೇಶದ ಭವಿಷ್ಯದಲ್ಲಿ ಸದಾಕಲಾ ಚಿರಸ್ಮರಣೀರಾಗಿ ಇರಲಿದ್ದಾರೆ ಎಂದು ಹೇಳಿದರು.
ಮೋದಿಯನ್ನು ಹಾಡಿ ಹೊಗಳಿದ ಸಿಎಂ:ಮೋದಿ ಬಂದ ನಂತರ ಜನರ ಜೀವನ ಗುಣಮಟ್ಟ ಸುಧಾರಿಸಿದೆ. ಕಾನೂನು ವ್ಯವಸ್ಥೆ, ಬಂದರು ಅಭಿವೃದ್ಧಿ, ಜನಸಾಮಾನ್ಯರಿಗೆ ಬೇಕಾದ ವ್ಯವಸ್ಥೆ ಬದಲಾವಣೆ ಆಗಿದೆ. ನಮ್ಮ ಸುತ್ತ ನೋಡಿದರೆ ಸಾಕು ಮೋದಿ ಏನು ಮಾಡಿದ್ದಾರೆ ಅನ್ನೋದು ಗೊತ್ತಾಗಲಿದೆ. ಗಾಂಧಿ ಕಂಡ ಸ್ವಚ್ಛ ಭಾರತದ ಬಗ್ಗೆ ಎಲ್ಲ ಪ್ರಧಾನಿಗಳು ಕಡೆಗಣನೆ ಮಾಡಿದ್ದರು. ಯಾರೂ ಮಹತ್ವ ನೀಡಿರಲಿಲ್ಲ. ಆದರೆ ಮೋದಿ ಸ್ವಚ್ಛತೆ ಕಲ್ಪನೆಯನ್ನು ಕೊಟ್ಟಿದ್ದಾರೆ. ಘರ್ ಘರ್ ಗಂಗೆ ಘೋಷಿಸಿ ಮನೆ ಮನೆಗೆ ನೀರು ಕೊಡುವ ಘೋಷಣೆ ಮಾಡಿದ್ದಾರೆ. ಯಾವ ಪಿಎಂ ಕೂಡ ಈ ಧೈರ್ಯ ತೋರಿರಲಿಲ್ಲ. ಎಲ್ಲರ ಮನೆಗೆ ನೀರು ಕೊಡುವುದು ಅಷ್ಟು ಸುಲಭದ ಮಾತಲ್ಲ. ಯಾವುದು ನಮಗೆ ಅಸಾಧ್ಯವಾಗಿತ್ತೋ ಅದನ್ನು ಸಾಧ್ಯವನ್ನಾಗಿ ಮಾಡುತ್ತಿರುವುದು ಮೋದಿ ಎಂದು ಮೋದಿಯನ್ನು ಹಾಡಿಹೊಗಳಿದರು.