ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿ ಸುಳ್ಳಿನ ಮೂಟೆಗಳನ್ನು ಉರುಳಿಸಿ ಹೋಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮೋದಿ, ಅಮಿತ್ ಶಾ ಬಾಯಿಬಿಟ್ಟರೆ ಸುಳ್ಳು ಹೇಳುತ್ತಾರೆ: ಸಿದ್ದರಾಮಯ್ಯ - Union Home Minister Amit Shah
ಕಾಂಗ್ರೆಸ್ ಪಕ್ಷದ ವಿರುದ್ಧ ತಿರುಚಿದ ಅಂಕಿಅಂಶಗಳನ್ನು ಮುಂದಿಟ್ಟುಕೊಂಡು ಆರೋಪಗಳನ್ನು ಮಾಡುವ ಮೊದಲು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮತ್ತೊಮ್ಮೆ ಹೋಂವರ್ಕ್ ಸರಿಯಾಗಿ ಮಾಡಿಕೊಂಡು ಬರಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಕುಟುಕಿದ್ದಾರೆ.
ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಯುಪಿಎ ಸರ್ಕಾರದ ಹತ್ತು ವರ್ಷಗಳಲ್ಲಿ ಕರ್ನಾಟಕಕ್ಕೆ ನೀಡಿದ್ದ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ. ಯುಪಿಎಗಿಂತ ತಮ್ಮ ಸರ್ಕಾರ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡಿದೆ ಎಂದು ಒಂದಷ್ಟು ಸುಳ್ಳು ಅಂಕಿ-ಅಂಶಗಳನ್ನು ಮುಂದಿಟ್ಟು ಹೇಳಿದ್ದಾರೆ. ವ್ಯಾಪಾರದಲ್ಲಿ ನುರಿತ ಗುಜರಾತಿಗಳು ಲೆಕ್ಕದಲ್ಲಿ ಪಕ್ಕಾ ಎನ್ನುವ ಅಭಿಪ್ರಾಯ ಇದೆ. ಆದರೆ ಆ ರಾಜ್ಯದವರಾದ ಪ್ರಧಾನಿ ಮತ್ತು ಗೃಹಸಚಿವರು ಬಾಯಿಬಿಟ್ಟರೆ ಸುಳ್ಳು ಲೆಕ್ಕಗಳೇ ಉದುರುತ್ತವೆ ಎಂದಿದ್ದಾರೆ.
ಮೊದಲನೆಯದಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುವ ದುಡ್ಡು ಭಿಕ್ಷೆ ಅಲ್ಲ, ಅದು ನ್ಯಾಯಬದ್ದವಾಗಿ ನಮಗೆ ಸಿಗಬೇಕಾಗಿರುವ ಪಾಲು. ಕರ್ನಾಟಕ ಪ್ರತಿವರ್ಷ ಅಂದಾಜು 2,20,000 ಕೋಟಿ ರೂಪಾಯಿಯಷ್ಟು ತೆರಿಗೆ-ಸುಂಕದ ಮೂಲಕ ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಅದರಲ್ಲಿ ಹಣಕಾಸು ಆಯೋಗದ ಶಿಫಾರಸಿನ ಸೂತ್ರದಂತೆ ಆ ತೆರಿಗೆ ಹಣದಲ್ಲಿ ಶೇಕಡಾ 42ರಷ್ಟು ಹಣವನ್ನು ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಹಿಂದಿರುಗಿ ಕೊಡಬೇಕು. ಆದರೆ ಬಿಜೆಪಿ ಆಡಳಿತದ ಕಾಲದಲ್ಲಿ ನಮಗೆಂದೂ ಶೇ 42ರಷ್ಟು ಪಾಲು ಸಿಕ್ಕಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.