ಬೆಂಗಳೂರು: ಡ್ರಗ್ಸ್ ದಂಧೆಕೋರರ ಜೊತೆ ನಿಕಟ ಸಂಪರ್ಕ ಹೊಂದಿರುವ ಆರೋಪದಡಿ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ಡ್ರಗ್ಸ್ ಸೇವನೆ ದೃಢವಾದ ಹಿನ್ನೆಲೆಯಲ್ಲಿ ರೂಪದರ್ಶಿ ಸೇರಿ ಇಬ್ಬರನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ.
ರಾಜಾಜಿನಗರದ ರಾಜ್ ಕುಮಾರ್ ರಸ್ತೆ ನಿವಾಸಿ ಸೋನಿಯಾ ಅಗರವಾಲ್ ಹಾಗೂ ಆಕೆಯ ಸ್ನೇಹಿತನನ್ನು ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ಮೇರೆಗೆ ನಿನ್ನೆ ದಾಳಿ ನಡೆಸಿದ್ದ ಪೊಲೀಸರು :ಡ್ರಗ್ಸ್ ಪೆಡ್ಲರ್ ನಿರಂತರ ಸಂಪರ್ಕ ಹೊಂದಿದ ಖಚಿತ ಮಾಹಿತಿ ಮೇರೆಗೆ ನಿನ್ನೆ ರೂಪದರ್ಶಿ ಸೋನಿಯಾ ಅಗರವಾಲ್, ಉದ್ಯಮಿ ಭರತ್ ಹಾಗೂ ವಚನ್ ಚಿನ್ನಪ್ಪ ಎಂಬುವರ ಮನೆಗಳ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ರೂಪದರ್ಶಿ ಮನೆಯಲ್ಲಿ 40 ಗ್ರಾಂ ಗಾಂಜಾ ಪತ್ತೆಯಾಗಿತ್ತು. ಈ ಸಂಬಂಧ ರೂಪದರ್ಶಿ ಹಾಗೂ ಸ್ನೇಹಿತನನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆಗೆ ಅಧಿಕಾರಿಗಳು ಒಳಪಡಿಸಿದ್ದರು. ಪರೀಕ್ಷೆಯಲ್ಲಿ ಡ್ರಗ್ಸ್ ಸೇವನೆ ದೃಢವಾಗಿದ್ದರಿಂದ ಇಬ್ಬರನ್ನು ಬಂಧಿಸಲಾಗಿದೆ.
ಥಾಮಸ್ ಕಲ್ಲು ಯಾರೆಂದೇ ಗೊತ್ತಿಲ್ಲ : ನೈಜೀರಿಯಾ ಮೂಲದ ಡ್ರಗ್ಸ್ ಪೆಡ್ಲರ್ ಥಾಮಸ್ ಕಲ್ಲು ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈತನ ಸಂಪರ್ಕದಲ್ಲಿ ಹಲವರ ಜೊತೆ ಇರುವುದನ್ನು ಪೊಲೀಸರು ಕಂಡುಕೊಂಡಿದ್ದರು. ಇದೇ ಆಧಾರದ ಮೇರೆಗೆ ಮೂವರ ಮನೆಗಳ ಮೇಲೆ ದಾಳಿ ನಡೆಸಿದ್ದರು. ಅಲ್ಲದೆ ವಿಚಾರಣೆ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಖಾಸಗಿ ಹೋಟೆಲ್ ವಾಶ್ ರೂಮ್ ನಲ್ಲಿ ಅಡಗಿಕೊಂಡಿದ್ದಳು. ಸದ್ಯ ವಿಚಾರಣೆ ವೇಳೆ ಥಾಮಸ್ ಕಲ್ಲು ಯಾರೆಂದು ನನಗೆ ಗೊತ್ತೇ ಇಲ್ಲ. ನನ್ನ ಮೇಲಿನ ಆರೋಪ ಸುಳ್ಳು ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ ಎಂದು ತಿಳಿದುಬಂದಿದೆ.
ವಿಚಾರಣೆಗೆ ಹಾಜರಾದ ಶಂಕಿತ ಆರೋಪಿಗಳು: ಉದ್ಯಮಿ ಭರತ್ ಹಾಗೂ ಡಿಜೆ ವಚನ್ ಚಿನ್ನಪ್ಪ ಅವರನ್ನು ನಿನ್ನೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಬಿಡುಗಡೆ ಮಾಡಿ ಇಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು. ಈ ನಿಟ್ಟಿನಲ್ಲಿ ಇಂದು ಇಬ್ಬರು ಗೋವಿಂದಪುರ ಪೊಲೀಸರ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಎಷ್ಟು ವರ್ಷಗಳಿಂದ ದಂಧೆಕೋರರ ಸಂಪರ್ಕದಲ್ಲಿದ್ದರು, ಹೈ-ಫೈ ಪಾರ್ಟಿಯಲ್ಲಿ ಯಾರು ಯಾರು ಭಾಗಿಯಾಗುತ್ತಿದ್ದರು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಪಾರ್ಟಿಯಲ್ಲಿ ಸ್ಯಾಂಡಲ್ ವುಡ್ ಸ್ಟಾರ್, ಗಣ್ಯರ ಮಕ್ಕಳು ಭಾಗಿಯಾಗಿರುವ ಬಗ್ಗೆ ಪೊಲೀಸರು ಗುಮಾನಿ ವ್ಯಕ್ತಪಡಿಸಿದ್ದಾರೆ.