ಬೆಂಗಳೂರು: ಸರ್ಕಾರಿ ಶಾಲಾ ಕಟ್ಟಡಗಳು ಎಂದ ತಕ್ಷಣ ಮೊದಲು ಮನಸ್ಸಲ್ಲಿ ಮೂಡುವುದೇ ಮೂಲಭೂತ ಮೂಲಸೌಕರ್ಯಗಳ ಕೊರತೆಯ ಚಿತ್ರಣ. ಆದರೆ 1984ರಲ್ಲಿ ಸ್ಥಾಪನೆಯಾದ ಬೆಂಗಳೂರಿನ ಆಡುಗೋಡಿ ಮುನಿಚಿನ್ನಪ್ಪ ಸರ್ಕಾರಿ ಶಾಲೆ ಈ ಅಭಿಪ್ರಾಯಕ್ಕೆ ಅಪವಾದ. ಸುಮಾರು 50 ವರ್ಷ ಹಳೆಯದಾದ ಶಾಲೆ 1ರಿಂದ 10ನೇ ತರಗತಿಯ ಮಕ್ಕಳಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಶಾಸಕ ರಾಮಲಿಂಗಾ ರೆಡ್ಡಿ ಅವರ ಸ್ಥಳೀಯ ಶಾಸಕರ ಕ್ಷೇತ್ರಾನುದಾನ, ಪಕ್ಕದಲ್ಲಿಯೇ ಇರುವ ಬಾಷ್ ಪ್ರಧಾನ ಕಚೇರಿ ಮತ್ತು ಹಲವು ದಾನಿಗಳ ಸಹಾಯದಿಂದ ರಾಜ್ಯದ ಮಾದರಿ ಸರ್ಕಾರಿ ಶಾಲೆಯಾಗಿ ಇದು ರೂಪುಗೊಂಡಿದೆ. ಅಷ್ಟೇಕೆ? ಯಾವುದೇ ಖಾಸಗಿ ಶಾಲೆಗೂ ಕಡಿಮೆಯಿಲ್ಲ ಎನ್ನುವಂತ ಗುಣಮಟ್ಟದ ಶಿಕ್ಷಣ ನೀಡುತ್ತಿದೆ.
ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್, ಪ್ರಯೋಗ ಶಾಲೆ, ಗ್ರಂಥಾಲಯಗಳು ಹಾಗು ವಿದ್ಯಾರ್ಥಿಗಳಿಗಾಗಿ ಹೆಲ್ತ್ ಕ್ಲಿನಿಕ್ ಕಾರ್ಯನಿರ್ವಹಿಸುತ್ತಿದೆ. ನುರಿತ ಶಿಕ್ಷಕರು ಟೆಕ್ಲ್ಯಾಬ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಓರ್ವ ನರ್ಸ್ ಚಿಕಿತ್ಸಾ ಕೇಂದ್ರದಲ್ಲಿದ್ದಾರೆ. ಮಕ್ಕಳು ಮತ್ತು ಚರ್ಮ ರೋಗ ತಜ್ಞರು ವಾರಕ್ಕೆರಡು ಬಾರಿ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸುತ್ತಾರೆ. ಹೊಸ ವಿನ್ಯಾಸದಲ್ಲಿ ಕಟ್ಟಡ ಮತ್ತು ಶಾಲಾ ಕೊಠಡಿಗಳನ್ನು ನಿರ್ಮಿಸಿ ವಿದ್ಯಾರ್ಥಿಗಳ ಯೋಚನೆಗಳಿಗೆ ಹೊಸ ಆಯಾಮ ನೀಡಲಾಗುತ್ತಿದೆ.
7 ರಿಂದ 8 ಕೋಟಿ ರೂ ವೆಚ್ಚದಲ್ಲಿ ಹೊಸ ಸೌಲಭ್ಯಗಳನ್ನು ಕಲ್ಪಿಸಿ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಅನುಕೂಲತೆಗಳನ್ನು ಕಲ್ಪಿಸಲಾಗಿದೆ. ಶಾಲೆಗೆ ನಗರದಲ್ಲೇ ಅತಿ ದೊಡ್ಡದು ಎನ್ನಬಹುದಾದ ಆಟದ ಮೈದಾನವಿದೆ. ಅಚ್ಚುಕಟ್ಟು ಮತ್ತು ಸ್ವಚ್ಛ ಪ್ರಾರ್ಥನಾ ಮಂದಿರವಿದೆ. ರಾಜ್ಯದಲ್ಲಿ ಇಷ್ಟು ಸೌಲಭ್ಯಗಳುಳ್ಳ, ಸುಸಜ್ಜಿತ ಸರ್ಕಾರಿ ಶಾಲೆ ಕಾಣಸಿಗುವುದು ವಿರಳ.