ಕಟ್ಟಡದ ಮೇಲಿಂದ ಬಿದ್ದ ಮೊಬೈಲ್ ಟವರ್ ಬೆಂಗಳೂರು:ಖಾಲಿ ನಿವೇಶನವನ್ನು ಜೆಸಿಬಿಯಿಂದ ಶುಚಿಗೊಳಿಸುವ ವೇಳೆ ಪಕ್ಕದಲ್ಲಿದ್ದ ಹಳೆಯ ಕಟ್ಟಡ ಮೊಬೈಲ್ ಟವರ್ ಸಮೇತ ಧರೆಗುರುಳಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಲಗ್ಗೆರೆಯ ಪಾರ್ವತಿನಗರದಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಘಟನೆ ನಡೆಯಿತು.
ಪ್ರೀತಿ ಬಾರ್ ಪಕ್ಕದಲ್ಲಿರುವ ಖಾಲಿ ನಿವೇಶನದಲ್ಲಿ ಮಾಲೀಕರು ಮನೆ ನಿರ್ಮಿಸುವ ಸಲುವಾಗಿ ಪಾಯ ತೆಗೆಸಲು ಸಿದ್ಧತೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಜೆಸಿಬಿಯಲ್ಲಿ ನಿವೇಶನವನ್ನು ಶುಚಿಗೊಳಿಸುವ ಕೆಲಸ ಮಾಡಲಾಗುತ್ತಿತ್ತು. ನಿವೇಶನದ ಪಕ್ಕದಲ್ಲಿದ್ದ ಮನೆಯ ಮೇಲೆ ಏರ್‌ಟೆಲ್ ಕಂಪನಿ ಮೊಬೈಲ್ ಟವರ್ ಅಳವಡಿಸಲಾಗಿತ್ತು. ಜೆಸಿಬಿಯಿಂದ ಮಣ್ಣು ತೆಗೆಯುತ್ತಿದ್ದಾಗ ಟವರ್ ಇದ್ದ ಮನೆಪಾಯ ಕುಸಿದ ಪರಿಣಾಮ, ಏಕಾಏಕಿ ಕಟ್ಟಡ ಹಾಗೂ ಅದರ ಮೇಲಿದ್ದ ಕಬ್ಬಿಣದ ಟವರ್ ನೆಲಕ್ಕಪ್ಪಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿವೇಶನದ ಮಾಲೀಕನ ವಿರುದ್ದ ದೂರು:ಮೊಬೈಲ್ ಟವರ್‌ಗೆ ಹೊಂದಿಕೊಂಡಿರುವ ಎರಡು ಅಂತಸ್ತಿನ ಕಟ್ಟಡದಲ್ಲಿ 11 ಜನ ವಾಸ ಮಾಡುತ್ತಿದ್ದರು. ಟವರ್ ಬೀಳುವ ಮುನ್ಸೂಚನೆ ಸಿಗುತ್ತಿದ್ದಂತೆ ಮನೆಯೊಳಗಿದ್ದ ಎಲ್ಲರನ್ನೂ ಹೊರಗೆ ಕರೆತರಲಾಗಿತ್ತು. ಹೀಗಾಗಿ ಅದೃಷ್ಟವಶಾತ್ 11 ಮಂದಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಮೊಬೈಲ್ ಟವರ್ ಬಿದ್ದು ಪಕ್ಕದಲ್ಲಿದ್ದ 2 ಅಂಗಡಿಗಳಿಗೆ ಹಾನಿಯಾಗಿದೆ. ಬಿಬಿಎಂಪಿ ಅಧಿಕಾರಿಗಳು ಮತ್ತು ನಂದಿನಿ ಲೇಔಟ್ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ನಿವೇಶನದ ಮಾಲೀಕ ಹರೀಶ್ ಎಂಬವರ ವಿರುದ್ಧ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಆರೋಪದಡಿ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಟ್ಟಡ ಮತ್ತು ಅದರ ಮೇಲಿದ್ದ ಟವರ್ ಧರೆಶಾಹಿಯಾಗುವ ದೃಶ್ಯವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಅದೃಷ್ಟವಶಾತ್ ಕಟ್ಟಡ ಮತ್ತು ಟವರ್ ಖಾಲಿ ನಿವೇಶನವಿದ್ದ ಜಾಗದಲ್ಲಿ ಬಿದ್ದಿದೆ. ಒಂದು ವೇಳೆ ಏನಾದರೂ ಬೇರೆ ಕಡೆ ಏನಾದರೂ ಬಿದ್ದಿದ್ದರೆ ಭಾರಿ ಅನಾಹುತವೇ ನಡೆಯುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ:ಬಿಬಿಎಂಪಿ ಅಧೀನದ ನರ್ಸರಿ ಸ್ಕೂಲ್ ಕಟ್ಟಡ ಕುಸಿತ ; ತಪ್ಪಿದ ಭಾರಿ ಅನಾಹುತ