ಬೆಂಗಳೂರು: ಇಂದಿನ ಹೈಟೆಕ್ ಯುಗದಲ್ಲಿ ಸ್ಮಾರ್ಟ್ ಪೋನ್ ಬಳಸುವವರೇ ಹೆಚ್ಚು. ಅದರಲ್ಲಿಯೂ ಕರೆ ಬಂದರಂತೂ ಮುಗಿದುಹೋಯ್ತು. ರಸ್ತೆ ಅಂತಾ ಪರಿಜ್ಞಾನವಿಲ್ಲದೇ ಮಾತನಾಡಿಕೊಂಡು ಓಡಾಡುತ್ತಾರೆ. ಫೋನ್ನಲ್ಲಿ ಮಾತನಾಡಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುವವರನ್ನು ಗುರಿಯಾಗಿಸಿಕೊಂಡು ದುಬಾರಿ ಬೆಲೆಯ ಮೊಬೈಲ್ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಮಡಿವಾಳ ಪೊಲೀಸರು ಖೆಡ್ಡಾಕ್ಕೆ ಬೀಳಿಸಿದ್ದಾರೆ.
ಬೆಂಗಳೂರು ನಿವಾಸಿಗಳಾದ ಸೈಯದ್ ಪೈರೋಜ್, ಶಬ್ಬೀರ್ ಅಹಮ್ಮದ್, ತುಫೇಲ್ ಹಾಗೂ ಬರ್ಕತ್ ಎಂಬುವವರನ್ನು ಬಂಧಿಸಿರುವ ಪೊಲೀಸರು, ಆರೋಪಿಗಳಿಂದ ಒಟ್ಟು 15 ಲಕ್ಷ ಮೌಲ್ಯದ 60 ವಿವಿಧ ಕಂಪನಿಯ ಮೊಬೈಲ್ ಫೋನ್ಗಳನ್ನ ವಶಪಡಿಸಿಕೊಂಡಿದ್ದಾರೆ.
ಪೋನ್ನಲ್ಲಿ ಮಾತನಾಡಿಕೊಂಡು ಹೋಗುವ ಒಬ್ಬಂಟಿಗರೇ ಇವರ ಟಾರ್ಗೆಟ್:ಸುಲಭವಾಗಿ ಹಣ ಸಂಪಾದಿಸಲು ಹಾಗೂ ಐಷರಾಮಿ ಜೀವನ ಲೀಡ್ ಮಾಡಲು ನಾಲ್ಕು ಮಂದಿ ಆರೋಪಿಗಳು ಒಟ್ಟುಗೂಡಿ ಪೂರ್ವಸಂಚು ರೂಪಿಸಿ ಫೀಲ್ಡ್ ಗಿಳಿಯುತ್ತಿದ್ದರು. ಮೊಬೈಲ್ ಕಳ್ಳತನ ಮಾಡುವ ಸಲುವಾಗಿ ಹಗಲು - ರಾತ್ರಿ ಎನ್ನದೇ ಒಂಟಿಯಾಗಿ ಓಡಾಡುವವರನ್ನು ಗುರಿಯಾಗಿಸಿ ಬೈಕ್ ನಲ್ಲಿ ಮೊಬೈಲ್ ಕಸಿಯುವ ಪ್ರವೃತ್ತಿ ಬೆಳೆಸಿಕೊಂಡಿದ್ದರು.