ಬೆಂಗಳೂರು: ಪಿಎಫ್‌ಐ ಬಂಧಿತ ಆರೋಪಿಗಳ ಮೊಬೈಲ್ ರಿಟ್ರೀವ್ ಡೇಟಾ ಕೆ.ಜಿ ಹಳ್ಳಿ ಪೊಲೀಸರ ಕೈ ಸೇರಿದೆ. ರಿಪೋರ್ಟ್ನಲ್ಲಿ ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, 55 ಮೊಬೈಲ್ಗಳಲ್ಲಿ ಅಡಗಿದ್ದ ಸಂಚಿನ ರಹಸ್ಯವನ್ನ ಪೊಲೀಸರು ಪತ್ತೆ ಮಾಡಿದ್ದಾರೆ. ರಿಟ್ರೀವ್ ರಿಪೋರ್ಟ್ನಲ್ಲಿ ಹಿಂದುತ್ವ ಹಾಗೂ ಆರ್ಎಸ್ಎಸ್ ಸಿದ್ಧಾಂತದ ಬಗ್ಗೆ ಚರ್ಚೆಯಾಗಿದ್ದು, ಕೆಲವು ಕಚೇರಿ ಹಾಗೂ ಮೊಬೈಲ್ಗಳಲ್ಲಿ ಹಿಂದೂ ಮುಖಂಡರ ಪೋಟೋಗಳು ಕೂಡ ಪತ್ತೆಯಾಗಿವೆ.
ರಾಜಕೀಯವಾಗಿ ಸಂಘಟನೆ ಬಲಪಡಿಸಲು ಟೆಕ್ನಿಕಲ್ ಆಗಿ ಪ್ಲಾನ್ ಮಾಡಿದ್ದ ಆರೋಪಿಗಳು ಹಿಜಾಬ್, ಹಲಾಲ್ ಕಟ್, ಆಜಾನ್ ವಿವಾದದ ಬಳಿಕ ಸಂಘಟನೆಯನ್ನ ಮತ್ತಷ್ಟು ಚುರುಕುಗೊಳಿಸಿದ್ದರು. ತಮ್ಮ ಸಮುದಾಯದ ಬಳಿಯೇ ವ್ಯವಹಾರ ನಡೆಸುವಂತೆ ಚರ್ಚೆ ಹಾಗೂ ಪ್ರೇರೇಪಣೆ ಜೊತೆ ಜೊತೆಗೆ ವಾರಕ್ಕೊಮ್ಮೆ ಆರೋಪಿಗಳು ಸಭೆ ಆಯೋಜಿಸುತ್ತಿದ್ದರು. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಕಲಬುರಗಿ, ದಾವಣಗೆರೆ, ಉಡುಪಿ ಹಾಗೂ ಕೇರಳದಲ್ಲಿನ ಸರಣಿ ಸಭೆಗಳ ಬಗ್ಗೆ ಚರ್ಚೆ ಮಾಡಿರುವುದು ಮೊಬೈಲ್ ಡೇಟಾದಲ್ಲಿ ಪತ್ತೆಯಾಗಿದೆ.
ಸಭೆ ಸೇರುವ ಹಿಂದಿನ ದಿನ ಆಯೋಜಕರಿಂದ ವಿಶೇಷ ಸೂಚನೆ ರವಾನೆಯಾಗುತ್ತಿತ್ತು. ಸಭೆಗೆ ಬರುವವರು ಬಸ್ನಲ್ಲಿ ಬರಬೇಕು. ಮೊಬೈಲ್ ಇಲ್ಲದೇ ಬರಬೇಕು. ಎಲ್ಲಿ ಸೇರಬೇಕೆಂದು ನಿರ್ಧರಿಸಿದ್ದ ಸ್ಥಳ, ಲೊಕೇಷನ್ ಪಾಸ್ ಮಾಡಿ ಬಳಿಕ ಆ ಸಂದೇಶ ಡಿಲೀಟ್ ಮಾಡಿರೋದು ಪತ್ತೆಯಾಗಿದೆ.
ಡೇಟಾ ಡಿಲಿಟ್: ತರಬೇತಿಯಲ್ಲಿ ಇಸ್ಲಾಮಿಕ್ ಪಾಠ ಬೋಧಿಸಲಾಗ್ತಿತ್ತು. ಬಳಿಕ ಐ ಶ್ರೇಡರ್ ಆಪ್ ಮೂಲಕ ಡೇಟಾ ಡಿಲಿಟ್ ಮಾಡಿದ್ದು ಆರೋಪಿಗಳ ಮೊಬೈಲ್ ರಿಟ್ರೀವ್ ವರದಿಯಲ್ಲಿ ಬೆಳಕಿಗೆ ಬಂದಿದೆ.
ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದ ಆರೋಪಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಆರೋಪಿಗಳಿಗೆ ಬೇಲ್ ಕೊಡಿಸಿರುವ ಬಗ್ಗೆಯೂ ಮಾತುಕತೆ ನಡೆಸಿರುವುದು ಪತ್ತೆಯಾಗಿದ್ದು, ರುದ್ರೇಶ್ ಕೊಲೆ ಪ್ರಕರಣದ ಆರೋಪಿಗಳು ಸಂಪರ್ಕದಲ್ಲಿರುವ ಸಾಧ್ಯತೆ ಬಗ್ಗೆ ತನಿಖೆ ಮುಂದುವರಿದಿದೆ.
ಟ್ರಾವೆಲ್ ಹಿಸ್ಟರಿ ಸಂಗ್ರಹ: ಯಾರ ಕಣ್ಣಿಗೂ ಬೀಳದಂತೆ ಆರೋಪಿಗಳು ಹಣಕಾಸು ನೋಡಿಕೊಳ್ತಿದ್ದರು. ಗ್ರಾಮ, ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಸಂಘಟನೆ ಮಾಡಿ ಸ್ಥಳೀಯ ಮಟ್ಟದಲ್ಲೇ ಹಣ ಸಂಗ್ರಹ ಹಾಗೂ ವೆಚ್ಚ ಮಾಡುತ್ತಿದ್ದರು. ಹೀಗಾಗಿಯೇ ದಾಳಿ ವೇಳೆ ಕೇವಲ 33 ಲಕ್ಷ ಪತ್ತೆಯಾಗಿತ್ತು. ಸದ್ಯ ಆರೋಪಿಗಳ ವಿದ್ಯಾಭ್ಯಾಸ ಹಾಗೂ ಕೆಲಸಗಳ ಬಗ್ಗೆ ತನಿಖೆ ಮುಂದುವರೆಸಿದ್ದು, ಆರೋಪಿಗಳು ಕಳೆದ ನಾಲ್ಕೈದು ತಿಂಗಳ ಟ್ರಾವೆಲ್ ಹಿಸ್ಟರಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
ಪಿಎಫ್ಐ ಬಂಧಿತ ಕಾರ್ಯಕರ್ತರನ್ನು ಮಹಜರಿಗೆ ಕರೆದೊಯ್ದ ಪೊಲೀಸರು:ಸಮಾಜವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದಡಿ ಕೆ. ಜಿ ಹಳ್ಳಿ ಪೊಲೀಸರಿಂದ ಬಂಧಿತರಾಗಿದ್ದ ಪಿಎಫ್ಐ ಕಾರ್ಯಕರ್ತರ ವಿಚಾರಣೆ ಚುರುಕುಗೊಂಡಿದ್ದು, ಬಂಧಿತರನ್ನ ಇಂದು ಕರೆದೊಯ್ದು ಸ್ಥಳ ಮಹಜರು ಮಾಡಲಾಗಿದೆ. ನಿನ್ನೆಯಷ್ಟೇ ಜೆ. ಸಿ ನಗರ, ಬೆನ್ಸನ್ ಟೌನ್ ಸೇರಿದಂತೆ ಬೆಂಗಳೂರಿನ ಹಲವು ಸ್ಥಳಗಳಲ್ಲಿ ಮಹಜರು ಮಾಡಿದ್ದ ಪೊಲೀಸರು ಇಂದೂ ಸಹ ರಾಜ್ಯದ ವಿವಿಧ ಭಾಗಗಳಿಗೆ ಆರೋಪಿಗಳನ್ನ ಕರೆದೊಯ್ದು ಸ್ಥಳ ಮಹಜರು ಪ್ರಕ್ರಿಯೆ ಮಾಡಿದ್ದಾರೆ.
ಮಂಗಳೂರು, ಮೈಸೂರು, ಕಲಬುರಗಿ ಸೇರಿದಂತೆ ವಿವಿಧೆಡೆ ಪಿಎಫ್ಐ ಕಾರ್ಯಕರ್ತರ ಬಂಧನವಾಗಿತ್ತು. ಇಂದು ಆಯಾ ಸ್ಥಳಗಳಿಗೆ ಬಂಧಿತರನ್ನ ಕರೆದೊಯ್ದು ಮಹಜರು ಮಾಡಲಾಗಿದ್ದು, ನಾಳೆಯೂ ಸಹ ಕೆಲವೆಡೆ ಮಹಜರು ಮಾಡುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎನ್ಐಎ ದಾಳಿ : ಕಾನೂನುಬಾಹಿರ ಚಟುವಟಿಕೆಗಳಿಗೆ ದೇಶ-ವಿದೇಶಗಳಿಂದ ಹಣ ಸಂಗ್ರಹಿಸಿ ಸಂಚು ರೂಪಿಸುತ್ತಿದ್ದ ಆರೋಪ ಪಿಎಫ್ಐ ಸಂಘಟನೆಯ ವಿರುದ್ಧ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕಳೆದವಾರ ದೇಶದಾದ್ಯಂತ ಪಿಎಫ್ಐ ಕಚೇರಿಗಳು, ನಾಯಕರುಗಳ ಮನೆ ಮೇಲೆ ಎನ್ಐಎ ದಾಳಿ ನಡೆಸಿತ್ತು.
ಲ್ಯಾಪ್ಟಾಪ್ಗಳ ವಶ: ಅಲ್ಲದೇ, ನಗರದ ಪೂರ್ವ ವಿಭಾಗದ ಪೊಲೀಸರು ಸಹ ಅಪರಾಧ ಸಂಚಿನ ಜಾಲದಲ್ಲಿ ಪಿಎಫ್ಐ ಕಾರ್ಯಕರ್ತರು ತೊಡಗಿದ್ದ ಮಾಹಿತಿ ಆಧರಿಸಿ 19 ಕಡೆಗಳಲ್ಲಿ ದಾಳಿ ನಡೆಸಿ 19 ಆರೋಪಿಗಳನ್ನ ಬಂಧಿಸಿದ್ದರು. ಬಂಧಿತರ ಮೊಬೈಲ್ ಹಾಗೂ ಲ್ಯಾಪ್ಟಾಪ್ಗಳನ್ನ ವಶಕ್ಕೆ ಪಡೆದು ಎಫ್ಎಸ್ಎಲ್ಗೆ ರವಾನಿಸಿದ್ದರು.
ಓದಿ:ಎಸ್ಡಿಪಿಐ ಕಚೇರಿ ಮೇಲೆ ಪೊಲೀಸರ ದಾಳಿ: ಕಚೇರಿ ಸೀಲ್ ಮಾಡಿದ ಸಿಬ್ಬಂದಿ