ಬೆಂಗಳೂರು:ಬಿಜೆಪಿ ಸರ್ಕಾರಕ್ಕೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಅಭಯ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿಧಾನಪರಿಷತ್ ನ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್, ಜೆಡಿಎಸ್ ಪಾರ್ಟಿ ಎಲ್ಲರ ಜೊತೆ ಇರುತ್ತದೆ ಎಂದು ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜೆಡಿಎಸ್ ಮೊದಲು ಕಾಂಗ್ರೆಸ್ ಜೊತೆ ಇತ್ತು. ಈಗ ಬಿಜೆಪಿ ಜೊತೆಗೂ ಕೈಜೋಡಿಸ್ತಿದೆ. ಮುಂದೆ ಯಾವ ಪಕ್ಷಕ್ಕೆ ಬೇಕಾದ್ರೂ ಹೋಗುತ್ತದೆ ಎಂದರು.
ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಇದರಲ್ಲಿ ಆಶ್ಚರ್ಯ ಪಡುವಂತದ್ದು ಏನೂ ಇಲ್ಲ. ದೇವೇಗೌಡರು ಹಲವು ಹೇಳಿಕೆ ಕೊಟ್ಟಿದ್ದಾರೆ. ಅವರ ಪಕ್ಷದ ನಿರ್ಣಯ,ಅದರ ಬಗ್ಗೆ ನಾವೇನು ಹೇಳೋಣ ಎಂದಿದ್ದಾರೆ.
ಬಿಜೆಪಿ ಹೈಕಮಾಂಡ್ ಎಲ್ಲಿದೆ?ನಾಗಪುರ ಯುನಿವರ್ಸಿಟಿ ಏನು ಹೇಳುತ್ತದೆ ಅದನ್ನು ಮಾಡುತ್ತದೆ ಎಂದು ಹೇಳಿದರು. ರಾಜ್ಯದಲ್ಲಿ ಪ್ರವಾಹ, ಕೊರೊನಾ ಇದೆ. ಇಂತಹ ಸಂದರ್ಭದಲ್ಲಿ ಅವರು ಎಲ್ಲಿ ನೋಡ್ತಾರೆ. ಅವರಿಗೆ ಜನಸಾಮಾನ್ಯರ ಬಗ್ಗೆ ಕಾಳಜಿಯೇ ಇಲ್ಲ ಎಂದು ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ದೇವೇಗೌಡರು ಮುತ್ಸದ್ದಿ; ಅಪಾರ್ಥ ಬೇಡ ಎಂದ ರವಿಕುಮಾರ್
ಬಿಜೆಪಿಗೆ ದೇವೇಗೌಡರ ಅಭಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಪರಿಷತ್ನ ಬಿಜೆಪಿ ಸದಸ್ಯ ರವಿಕುಮಾರ್, ದೇವೇಗೌಡರು ಹಿರಿಯ ಮುತ್ಸದ್ದಿ. ಅವರ ಹೇಳಿಕೆಗೆ ಅಪಾರ್ಥ ಮಾಡುವುದು ಬೇಡ. ಬಹಳ ಮುತ್ಸದ್ದಿಯಂತೆ ಅವರು ಹೇಳಿದ್ದಾರೆ. ನಿಶ್ಚಿಂತೆಯಿಂದ ಸರ್ಕಾರ ನಡೆಸಿ ಎಂದಿದ್ದಾರೆ ಎಂದು ಹೇಳಿದರು. ಮಾಜಿ ಪ್ರಧಾನಿ ಆಗಿರುವುದರಿಂದ ಸಿಎಂ ಬಸವರಾಜ ಬೊಮ್ಮಾಯಿ ಅವರು ದೇವೇಗೌಡರನ್ನು ಭೇಟಿ ಮಾಡಿದ್ದಾರೆ ಎಂದ್ರು.
ನಮ್ಮ ಹೈಕಮಾಂಡ್ ಸ್ಟ್ರಾಂಗ್ ಇದೆ. ಕಾಂಗ್ರೆಸ್ನವರು ಡಿ.ಕೆ ಶಿವಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಒಂದು ವರ್ಷ ತೆಗೆದುಕೊಂಡಿದ್ದಾರೆ. ಯೂತ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡುವುದಕ್ಕೆ ಒಂದು ವರ್ಷ ಆಗಿದೆ. ಅವರು ಅದರ ಬಗ್ಗೆ ನೋಡಿಕೊಳ್ಳಲಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸಂಪುಟ ರಚನೆ ವಿಳಂಬವಾಗುತ್ತಿಲ್ಲ. ಸಿಎಂ ಆಯ್ಕೆಯೂ ಗೊಂದಲವಿಲ್ಲದೆ ಮುಗಿದಿದೆ. ಸಂಪುಟ ರಚನೆಯಲ್ಲಿ ಯಾವುದೇ ಗೊಂದಲವಿಲ್ಲ ಎಂದರು. ಮಂತ್ರಿ ಪದವಿ ಸಿಕ್ಕರೆ ನನಗೆ ಸಂತೋಷ. ಸಿಕ್ಕರೆ ಕೆಲಸ ಮಾಡುತ್ತೇನೆ. ಸಿಗದಿದ್ದರೂ ಪರವಾಗಿಲ್ಲ. ಎಲ್ಲರಿಗೂ ಸಿಗುತ್ತದೆಂದು ಹೇಳುವುದಕ್ಕೆ ಆಗುವುದಿಲ್ಲ. ಸರ್ಕಾರ ನಡೆಸುವುದು ಅಷ್ಟು ಸುಲಭವಲ್ಲ ಎಂದು ಹೇಳಿದರು.