ಬೆಂಗಳೂರು :ಸದನದಲ್ಲಿ ಉಪಸಭಾಪತಿ ಧರ್ಮೇಗೌಡರ ಮೇಲೆ ದೈಹಿಕ ಹಲ್ಲೆ ನಡೆದಿದ್ದು, ಅವರನ್ನು ರಕ್ಷಣೆ ಮಾಡುವಲ್ಲಿ ಮಾರ್ಷಲ್ಗಳು ವಿಫಲರಾಗಿದ್ದಾರೆ. ಈ ಕುರಿತು ತನಿಖೆ ಆಗಬೇಕು ಎಂದು ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿರುವವರಲ್ಲಿ ನಾನು ಮೊದಲಿಗಳಾಗಿದ್ದೇನೆ. ನಿಯಮದ ಪ್ರಕಾರ ಹಾವು-ಏಣಿ ಆಟ ನಡೆಯುತ್ತಲೇ ಇತ್ತು. ನಾವು ನಿಯಮದ ಪುಸ್ತಕವನ್ನು ಅಧ್ಯಯನ ಮಾಡಿ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದೇವೆ. ನಿಯಮಾವಳಿ ಪ್ರಕಾರ ಉಪಸಭಾಪತಿಗಳು ಸಭಾಪತಿ ಸ್ಥಾನದ ಮೇಲೆ ಕುಳಿತುಕೊಳ್ಳಬೇಕು. ಅದರ ಪ್ರಕಾರ ಇಂದು ಉಪಸಭಾಪತಿಗಳು ಪೀಠದ ಮೇಲೆ ಕುಳಿತಿದ್ದು ಸಿಂಧುವಾಗಿದೆ ಎಂದರು.
ಇದನ್ನೂ ಓದಿ : ವಿಧಾನ ಪರಿಷತ್ನಲ್ಲಿ ಹೈಡ್ರಾಮಾ - ಬಿಜೆಪಿ-ಕಾಂಗ್ರೆಸ್ ಸದಸ್ಯರ ಮಧ್ಯೆ ಕಿತ್ತಾಟ
ಉಪಸಭಾಪತಿಗಳು ಸದನವನ್ನು ಆರಂಭಿಸಿದ್ದರು. ಆದರೆ, ಕಾಂಗ್ರೆಸ್ ಸದಸ್ಯ ನಜೀರ್ ಬಂದು ಸದನದ ಬಾಗಿಲನ್ನು ಒದ್ದರು, ನಮಗೆ ಇದು ಮಾನಸಿಕವಾಗಿ ಘಾಸಿಯಾಗಿದೆ. ಕೆಂಪೇಗೌಡರು ಇಂತಹ ಭವ್ಯ ನಗರ ಕೊಟ್ಟರು, ಕೆಂಗಲ್ ಹನುಮಂತಯ್ಯನವರು ವಿಧಾನಸೌಧ ಕಟ್ಟಿದರೂ, ಒಂದು ದಿನವೂ ಇಲ್ಲಿ ಕುಳಿತುಕೊಳ್ಳಲಿಲ್ಲ. ಆದರೆ ಕೆಟ್ಟ ಘಟನೆಗೆ ಇಂದು ವಿಧಾನಪರಿಚತ್ ಸಾಕ್ಷಿಯಾಯಿತು ಎಂದು ತೇಜಸ್ವಿನಿ ಗೌಡ ವಿಷಾದ ವ್ಯಕ್ತಪಡಿಸಿದರು.