ಬೆಂಗಳೂರು: ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಬಗ್ಗೆ ಆಡಿರುವ ಕ್ಷುಲ್ಲಕ ಮಾತುಗಳು ಅವರ ಘನತೆಗೆ ತಕ್ಕದ್ದಲ್ಲ ಎಂದು ಜೆಡಿಎಸ್ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಟಿ ಎ ಶರವಣ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮ್ಮ ರಾಜಕೀಯ ಬದುಕಿನ ಆರಂಭದ ಕಾಲದಲ್ಲಿ ಕುಮಾರಸ್ವಾಮಿ ಅವರ ಜೊತೆಗಿದ್ದು, ಅವರಿಂದ ರಾಜಕೀಯ ಲಾಭ ಪಡೆದು, ಏಳಿಗೆಯಾಗಿ ಈಗ ವ್ಯಕ್ತಿಗತವಾಗಿ ನಿಂದಿಸುವ ಮಟ್ಟಕ್ಕೆ ಜಮೀರ್ ಅಹ್ಮದ್ ಹೋಗಿರುವುದು ಅವರ ಮಟ್ಟವನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.
ರಾಜಕಾರಣ ನಿಂತ ನೀರಲ್ಲ. ಕಾಲಾಂತರದಲ್ಲಿ ಬದಲಾಗುತ್ತದೆ. ಆದರೆ, ಹತ್ತಿದ ಏಣಿಯನ್ನೇ ಕಾಲಲ್ಲಿ ಒದೆಯುವ ಜಮೀರ್ ಅಹ್ಮದ್ ಮನಸ್ಥಿತಿ ಸರಿಯಲ್ಲ. ಇದು ರಾಜಕೀಯ ದ್ರೋಹದ ಮನೋಭಾವ ಎನ್ನದೇ ವಿಧಿಯಿಲ್ಲ ಎಂದು ಟೀಕಿಸಿದರು. ಈ ಹಿಂದೆ ಜಮೀರ್ ರಾಜಕೀಯವಾಗಿ ಇನ್ನೂ ಕಣ್ಣು ಬಿಡುತ್ತಿದ್ದಾಗ, ಯಾವ ಕುಮಾರಣ್ಣ ಅವರನ್ನು ತಮ್ಮದೇ ಬಸ್ನಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿಕೊಂಡು ಹೋದಾಗ ಯಾವ ಚಡ್ಡಿ ಹಾಕಿದ್ದರೋ, ಈಗಲೂ ಅಂಥದ್ದೇ ಚಡ್ಡಿ ಹಾಕಿದ್ದಾರೆ. ಆಗ ಜಮೀರ್ ಅಹ್ಮದ್ ಅವರಿಗೆ ಪರಿವೆ ಇರಲಿಲ್ಲವೇ?. ಕುಮಾರಣ್ಣ ಯಾವತ್ತೂ ಬದಲಾಗಿಲ್ಲ. ನಂಬಿದ ತತ್ತ್ವ ಸಿದ್ಧಾಂತದಲ್ಲಿ ರಾಜಿ ಮಾಡಿಕೊಂಡು ಅಧಿಕಾರಕ್ಕಾಗಿ ರಾಜಕಾರಣ ಮಾಡಿದವರಲ್ಲ ಎಂದು ಹೇಳಿದರು.