ಬೆಂಗಳೂರು: ಕೇಂದ್ರ ಸರ್ಕಾರ ಚುನಾವಣೆ ಸಂದರ್ಭ ಮತ್ತೊಮ್ಮೆ ತನ್ನ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಗಂಭೀರ ಆರೋಪಿಸಿದ್ದಾರೆ.
ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿರುವ ಅವರು, ಚುನಾವಣಾ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದಕ್ಕೆ ನಿದರ್ಶನ ಎನ್ನುವಂತೆ ನರೇಂದ್ರ ಮೋದಿ ಸರ್ಕಾರ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಕೋಲ್ಕತ್ತಾ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದೆ. ಇಷ್ಟು ದಿನ ಸುಮ್ಮನಿದ್ದ ಸಿಬಿಐ, ಚುನಾವಣೆ ಸಂದರ್ಭದಲ್ಲಿ ಜಾಗೃತವಾಗಿದ್ದೇಕೆ..? ಪ್ರತಿಪಕ್ಷಗಳನ್ನು ನೇರವಾಗಿ ಎದುರಿಸಲಾಗದ ಬಿಜೆಪಿ ಸಿಬಿಐ ಬಳಸಿಕೊಂಡು ಹೀನ ರಾಜಕಾರಣ ಮಾಡುತ್ತಿದೆ. ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ದೂರಿದ್ದಾರೆ.