ಬೆಂಗಳೂರು: ಅನೇಕ ಜನ ಜೆಡಿಎಸ್ನಲ್ಲಿರುವ ಶಾಸಕರು ಬಿಜೆಪಿ ಉತ್ತಮ ಸರ್ಕಾರ ನೀಡುತ್ತೆ ಎಂದು ಬಾಹ್ಯ ಬೆಂಬಲ ನೀಡಲು ಮುಂದಾಗಿದ್ದಾರೆ. ನಮ್ಮ ಪಕ್ಷ ಆ ಬಗ್ಗೆ ಯೋಚಿಸಿಲ್ಲ. ಆದರೆ, ಯಡಿಯೂರಪ್ಪನವರ ಸರ್ಕಾರದ ಬಗ್ಗೆ ಒಲವು ತೋರಿಸಿರೋ ಜೆಡಿಎಸ್ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಿಜೆಪಿ ಎಂಎಲ್‌ಸಿ ಎನ್. ರವಿಕುಮಾರ್ ಹೇಳಿದ್ದಾರೆ.
ಜೆಡಿಎಸ್ ಶಾಸಕರ ಬಾಹ್ಯ ಬೆಂಬಲದ ಬಗ್ಗೆ ಬಿಜೆಪಿ ನಾಯಕರು ಏನಂತಾರೆ.. ಜೆಡಿಎಸ್ ವರಿಷ್ಠ ನಾಯಕರಿಂದ ನಮಗೆ ಆ ರೀತಿಯ ಬೇಡಿಕೆ ಬಂದರೆ ನಮ್ಮ ವರಿಷ್ಠರು ತೀರ್ಮಾನ ಮಾಡುತ್ತಾರೆ. ಸೋಮವಾರ 100ಕ್ಕೆ 100 ಬಹುಮತ ಸಾಬೀತು ಪಡಿಸುತ್ತೇವೆ. ಈಗ ವಿಧಾನಸಭೆಯಲ್ಲಿ 209 ಸಂಖ್ಯಾಬಲವಿದೆ. ನಾವು ಯಾವ ಪಕ್ಷದ ಬೆಂಬಲವಿಲ್ಲದೆ ಬಹುಮತ ಸಾಬೀತುಪಡಿಸಲು ಶಕ್ತರಾಗಿದ್ದೇವೆ ಎಂದು ಎನ್. ರವಿಕುಮಾರ್ ತಿಳಿಸಿದರು.
ಇದೇ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ,ಶೇಕಡಾನೂರಕ್ಕೆ ನೂರು ನಾವು ಬಹುಮತ ಸಾಬೀತು ಪಡಿಸುತ್ತೇವೆ. ಯಡಿಯೂರಪ್ಪ ಅವರನ್ನು ಸೌಹಾರ್ದಯುತ ಭೇಟಿ ಮಾಡಿ ಶುಭ ಹಾರೈಸಿದ್ದೇನೆ. ಯಡಿಯೂರಪ್ಪ ಅವರು, ಒಬ್ಬ ಹೋರಾಟಗಾರರು. ಸ್ವಪ್ರಯತ್ನದಿಂದ ರೈತನಾಯಕನಾಯಕನಾಗಿ ಹೊರಹೊಮ್ಮಿದವರು. ಅಧಿಕಾರಕ್ಕೆ ಬಂದ ತಕ್ಷಣ ರೈತರ ಪರ ನಿರ್ಣಯ ಕೈಗೊಂಡಿದ್ದಾರೆ. ಬಡವರು, ಕೂಲಿಕಾರ್ಮಿಕರು, ನೇಕಾರರ ಜೀವನ ಗುಣಮಟ್ಟ ಹೆಚ್ಚಿಸಲಿದ್ದಾರೆ ಎಂದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಇನ್ಮುಂದೆ ಕೇಂದ್ರದ ಕಿಸಾನ್ ಸನ್ಮಾನ್ ಯೋಜನೆಯಡಿ 6 ಸಾವಿರ ರೂ. ಜತೆಗೆ 4 ಸಾವಿರ ರೂ. ರೈತರಿಗೆ ಸಿಗಲಿದೆ. ಇದರಿಂದ 79 ಲಕ್ಷ ರೈತರ ಕುಟುಂಬಗಳಿಗೆ ಸಹಾಯಕವಾಗಲಿದೆ. ವಾರ್ಷಿಕವಾಗಿ 10 ಸಾವಿರ ರೂ. ರೈತರಿಗೆ ಸಿಕ್ಕಂತಾಗುತ್ತದೆ. ಹಿಂದಿನ ಸರ್ಕಾರ ಶೇ. ಐವತ್ತರಷ್ಟು ರೈತರನ್ನು ಗುರುತಿಸಿರಲಿಲ್ಲ ಎಂದರು.
ಇದೇ ವೇಳೆ ನೂತನ ಸಿಎಂ ಯಡಿಯೂರಪ್ಪನವರನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ಮಾಡಿ ಶುಭ ಹಾರೈಸಿದರು. ಬೆಂಗಳೂರು ನಗರ ಆಯುಕ್ತ ಅಲೋಕ್ ಕುಮಾರ್, ಎಲ್ಲ ಬೆಂಗಳೂರಿನ ಡಿಸಿಪಿಗಳು, ಹೆಚ್ಚುವರಿ ಆಯುಕ್ತರು, ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಬಳಿಕ ಸಿಎಂ ತಮ್ಮ ಹುಟ್ಟೂರಾದ ಮಂಡ್ಯ ಜಿಲ್ಲೆಯ ಬೂಕನಕೆರೆಗೆ ತೆರಳಿದರು.