ಬೆಂಗಳೂರು:ಕೋವಿಡ್-19 ರೋಗದ ನಿಯಂತ್ರಣಕ್ಕೆ ಹಗಲಿರುಳು ಹೋರಾಟ ನಡೆಸುತ್ತಿರುವ ಗುತ್ತಿಗೆ ಆಧಾರದ ಕೋವಿಡ್ ವಾರಿಯರ್ಸ್ಗಳಿಗೆ ಇನ್ನೂ ಸಂಬಳ ಬಿಡುಗಡೆ ಮಾಡದಿರುವ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ, ವಿಧಾನ ಪರಿಷತ್ ಸದಸ್ಯ ಜಿ. ರಘು ಆಚಾರ್ ಇಂದು ಪ್ರತಿಭಟನೆ ನಡೆಸಿದ್ದಾರೆ.
ವಿಧಾನಸೌಧ ಹಾಗೂ ವಿಕಾಸಸೌಧದ ಮಧ್ಯದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ರಘು ಆಚಾರ್ ಅವರಿಗೆ ಎಂಎಲ್ಸಿ ಬಿ.ಕೆ. ಹರಿಪ್ರಸಾದ್ ಅವರು ಸಾಥ್ ನೀಡಿದ್ದಾರೆ.
ಪ್ರತಿಭಟನೆ ನಡೆಸಿದ ವಿಧಾನಪರಿಷತ್ ಸದಸ್ಯ ರಘು ಆಚಾರ್ ಈ ಸಂದರ್ಭದಲ್ಲಿ ಮಾತನಾಡಿದ ರಘು ಆಚಾರ್, ಚಿತ್ರದುರ್ಗ ಜಿಲ್ಲೆಯ ಕೋವಿಡ್ ಆಸ್ಪತ್ರೆಗೆ ಕಳೆದ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಎರಡು ಬಾರಿ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿಸಿ ಬಂದಿದ್ದೆ. ಈ ಸಂದರ್ಭದಲ್ಲಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ನೌಕರರು ಕಳೆದ ನಾಲ್ಕು ತಿಂಗಳಿಂದ ಸಂಬಳ ನೀಡದಿರುವ ಬಗ್ಗೆ ತಿಳಿಸಿದರು. ಇದನ್ನು ಪರಿಶೀಲಿಸಿದಾಗ ರಾಜ್ಯಾದ್ಯಂತ ಕೋವಿಡ್ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಎಲ್ಲ ಗುತ್ತಿಗೆ ನೌಕರರು ಇದೇ ಸಮಸ್ಯೆ ಎದುರಿಸುತ್ತಿರುವುದು ಕಂಡು ಬಂದಿದೆ ಎಂದು ಹೇಳಿದರು.
ನಾನು ಕಳೆದ ತಿಂಗಳು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ರಾಜ್ಯಾದ್ಯಂತ ಕೋವಿಡ್ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ನೌಕರರಿಗೆ ಸಂಬಳ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೆ. ಆದರೆ ಇದುವರೆಗೂ ಸರ್ಕಾರ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ಸರ್ಕಾರ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೆ ನಡೆಯುವ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಸದನದಲ್ಲಿ ಧರಣಿ ನಡೆಸುವ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು.