ಬೆಂಗಳೂರು: ನಿರಂತರವಾಗಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಆರೋಪದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟಿಸಲಾಗಿದೆ.
ಪುಟ್ಟಣ್ಣರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಪಕ್ಷದಿಂದ ಉಚ್ಚಾಟಿಸಿರುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಧಾನ ಪರಿಷತ್ ಸದಸ್ಯರಾಗಿ ಪುಟ್ಟಣ್ಣ ಆಯ್ಕೆಯಾಗಿದ್ದರು. ಆದರೆ, ಅವರು ಪಕ್ಷದ ಕಾರ್ಯಕ್ರಮಗಳು ಹಾಗೂ ಮತ್ತಿತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರಲಿಲ್ಲ. ಜೊತೆಗೆ ನಾಯಕರ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದರು. ಹಾಗಾಗಿ, ಪುಟ್ಟಣ್ಣರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
ಜೆಡಿಎಸ್ ಸದಸ್ಯ ಪುಟ್ಟಣ್ಣ ಪಕ್ಷದಿಂದ ಉಚ್ಚಾಟನೆ ವಿಧಾನ ಪರಿಷತ್ ಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಪುಟ್ಟಣ್ಣ ಅವರಿಗೆ ಪರ್ಯಾಯವಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜೆಡಿಎಸ್ ವರಿಷ್ಠರು ನಿರ್ಧರಿಸಿದ್ದಾರೆ. ಹಾಗಾಗಿ, ಈ ಸಂಬಂಧ ಸಭೆ ನಡೆಸಿರುವ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ. ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ, ಜೆಡಿಎಸ್ ಯುವ ಮುಖಂಡ ಎ.ಪಿ. ರಂಗನಾಥ್ ಅವರನ್ನು ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕಣಕ್ಕಿಳಿಸಲು ದೇವೇಗೌಡರು ಒಲವು ತೋರಿಸಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಸದಸ್ಯ ಪುಟ್ಟಣ್ಣ ಪಕ್ಷದಿಂದ ಉಚ್ಚಾಟನೆ ಪಕ್ಷ ನನ್ನನ್ನು ಉಚ್ಚಾಟಿಸಿದ್ದಕ್ಕೆ ಕಾರಣ ಕೇಳಿ ಪತ್ರ ಬರೆಯುತ್ತೇನೆ:
ಈ ಬಗ್ಗೆ ಪ್ರತಿಕ್ರಿಯಿಸಿರುವ ಪುಟ್ಟಣ್ಣ, ಜೆಡಿಎಸ್ ಪಕ್ಷ ನನ್ನನ್ನ ಉಚ್ಚಾಟಿಸಿದಕ್ಕೆ ಕಾರಣ ಕೇಳಿ ಪತ್ರ ಬರೆಯುತ್ತೇನೆ ಎಂದು ತಿಳಿಸಿದ್ದಾರೆ. ಶಾಸಕರ ಭವನದಲ್ಲಿ ಮಾತನಾಡಿ, ಮಾಧ್ಯಮಗಳ ಮೂಲಕ ನನಗೆ ಈ ಮಾಹಿತಿ ಲಭಿಸಿದೆ. ಇದುವರೆಗೂ ಪಕ್ಷದ ವತಿಯಿಂದ ಯಾವುದೇ ಅಧಿಕೃತ ಮಾಹಿತಿ ಅಥವಾ ಉಚ್ಚಾಟನೆಗೊಳಿಸಿರುವ ಪತ್ರ ಕೈ ಸೇರಿಲ್ಲ ಎಂದಿದ್ದಾರೆ.
ನನ್ನ ಉಚ್ಚಾಟನೆಗೆ ಪಕ್ಷ ನೀಡುವ ಕಾರಣ ಏನು ಎನ್ನುವುದನ್ನು ಮೊದಲು ತಿಳಿದುಕೊಳ್ಳುತ್ತೇನೆ. ನನಗೆ ತಿಳಿವಳಿಕೆ ಇರುವಂತೆ ಯಾವ ಸಂದರ್ಭದಲ್ಲಿಯೂ ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಪಕ್ಷಕ್ಕೆ ನನ್ನ ಯಾವ ಚಟುವಟಿಕೆ ವಿರೋಧಿಯಾಗಿ ಕಂಡಿದೆ ಎನ್ನುವುದನ್ನು ತಿಳಿದುಕೊಳ್ಳಬೇಕಿದೆ. ನಾನು ಪಕ್ಷವಿರೋಧಿ ಚಟುವಟಿಕೆ ಮಾಡಿದ್ದರೆ ಅದಕ್ಕೆ ಸಂಬಂಧಿಸಿ ನನಗೆ ನೋಟಿಸ್ ನೀಡಬೇಕಿತ್ತು. ಆದರೆ ಆ ರೀತಿ ಯಾವ ನೋಟಿಸ್ ಕೂಡ ನನಗೆ ಬಂದಿಲ್ಲ. ಇದ್ದಕ್ಕಿದ್ದಂತೆ ಈ ನಿರ್ಧಾರ ಕೈಗೊಳ್ಳಲು ಕಾರಣ ಏನಿರಬಹುದು ಎಂದು ತಿಳಿಯುತ್ತಿಲ್ಲ ಎಂದರು.
ಪಕ್ಷ ವಿರೋಧಿ ಅಲ್ಲ ಬೇರೆ ಕಾರಣವಿದೆ:ನನ್ನ ಉಚ್ಚಾಟನೆ ಹಿಂದೆ ಪಕ್ಷವಿರೋಧಿ ಚಟುವಟಿಕೆ ಕಾರಣವಲ್ಲ. ಬೇರೇನೋ ಉದ್ದೇಶವಿದೆ. ಅದನ್ನು ತಿಳಿದುಕೊಂಡ ನಂತರ ಮಾಧ್ಯಮಗಳ ಮುಂದೆ ಬರುತ್ತೇನೆ. ಮೂರು ಅವಧಿಗೆ ನನ್ನನ್ನು ಆಯ್ಕೆ ಮಾಡಿದ ಶಿಕ್ಷಕರು ಸದಾ ನನ್ನ ಜೊತೆಗಿದ್ದಾರೆ. ಅವರು ಕೈಬಿಡುವುದಿಲ್ಲ ಎಂಬ ವಿಶ್ವಾಸ ಇದೆ. ಅವರೊಂದಿಗೆ ಮಾತುಕತೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ನನ್ನನ್ನು ಪಕ್ಷದಿಂದ ಉಚ್ಚಾಟಿಸಿದೆ ಎಂಬ ವಿಚಾರ ಇದೀಗ ತಾನೆ ತಿಳಿದು ಬಂದಿದ್ದು ಈ ಸಂಬಂಧ ಪಕ್ಷದ ನಾಯಕರು ನನ್ನೊಂದಿಗೆ ಮಾತನಾಡಲಿಲ್ಲ ಎಂದು ಸ್ಪಷ್ಟಪಡಿಸಿದರು.