ಬೆಂಗಳೂರು: ನಾಲಿಗೆ ಮೇಲೆ ನಿಂತ ನಾಯಕ ಅಂದರೆ ಅದು ಸಿಎಂ ಬಿ.ಎಸ್. ಯಡಿಯೂರಪ್ಪ. ನಾವೆಲ್ಲ ಮಾತಿಗೆ ತಪ್ಪದ ನಾಯಕ ಯಡಿಯೂರಪ್ಪ ಅವರ ಬೆಂಬಲಕ್ಕೆ ಇದ್ದೇವೆ ಎಂದು ವಿಧಾನಪರಿಷತ್ ನೂತನ ಸದಸ್ಯ ಹೆಚ್. ವಿಶ್ವನಾಥ್ ಹೇಳಿದರು.
ಮಾತಿಗೆ ತಪ್ಪದ ನಾಯಕ ಯಡಿಯೂರಪ್ಪ, ನಾವೆಲ್ಲ ಅವರ ಬೆಂಬಲಕ್ಕಿದ್ದೇವೆ: ಹೆಚ್.ವಿಶ್ವನಾಥ್ - ಹೆಚ್ ವಿಶ್ವನಾಥ್
ಕೊಟ್ಟ ಮಾತಿಗೆ ತಪ್ಪದೆ, ನಮಗೆ ವಿಧಾನಪರಿಷತ್ ಸದಸ್ಯರಾಗಲು ಅವಕಾಶ ಮಾಡಿಕೊಟ್ಟ ಮುಖ್ಯಮಂತ್ರಿ ಬಿ ಎಸ್. ಯಡಿಯೂರಪ್ಪ ನಾಲಿಗೆ ಮೇಲೆ ನಿಂತ ನಾಯಕ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಬಣ್ಣಿಸಿದ್ದಾರೆ. ಅಲ್ಲದೆ, ಅವರ ಬೆಂಬಲಕ್ಕೆ ನಿಲ್ಲುವುದಾಗಿ ತಿಳಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪರಿಷತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ನಾಮನಿರ್ದೇಶನಕ್ಕೆ ಅವಕಾಶ ಕಲ್ಪಿಸಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಆಧ್ಯಕ್ಷ ಜೆ. ಪಿ. ನಡ್ಡಾ ಹಾಗೂ ಸಿಎಂ ಯಡಿಯೂರಪ್ಪ ಅವರಿಗೆ ಧನ್ಯವಾದಗಳು. ನಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ. ಕೊರೊನಾ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಎಲ್ಲಾ ಜನ ಪ್ರತಿನಿಧಿಗಳು ಕೊರೊನಾ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ನಾವೂ ಅವರೊಂದಿಗೆ ಕೈ ಜೋಡಿಸಿ ಕೆಲಸ ಮಾಡುತ್ತೇವೆ ಎಂದರು.
ಭಾರತೀಯ ಜನತಾ ಪಕ್ಷದ ಇಡೀ ಕುಟುಂಬ ನಮಗೆ ಆಶೀರ್ವಾದ ಮಾಡಿರುವುದು ಸಂತೋಷವಾಗಿದೆ. ಶಾಂತಾರಾಮ್ ಸಿದ್ದಿಯವರು ಬುಡಕಟ್ಟು ಸಮಾಜದ ಅಭಿವೃದ್ಧಿಗೆ ಎಲೆಮರೆ ಕಾಯಿಯಂತೆ ಕೆಲಸ ಮಾಡುತ್ತಿದ್ದಾರೆ. ಅವರ ಸಮುದಾಯದ ಮಕ್ಕಳ ಶಿಕ್ಷಣ ಹಾಗೂ ಸಮಾಜದ ಅಭಿವೃದ್ಧಿಗೆ ಸರ್ಕಾರದ ಮಟ್ಟದಿಂದಲೂ ಎಲ್ಲಾ ಸಹಕಾರ ನೀಡಲಾಗುತ್ತದೆ. ಬಿಜೆಪಿ ಎಲ್ಲಾ ಜಾತಿ ಜನಾಂಗಕ್ಕೆ ಅವಕಾಶ ನೀಡುತ್ತಿದೆ. ಇದು ಪಕ್ಷದ ಕಾರ್ಯಕರ್ತರಿಗೆ ಉತ್ಸಾಹ ಹೆಚ್ಚಾಗುವಂತೆ ಮಾಡಿದೆ ಎಂದು ಹೇಳಿದರು.