ಕರ್ನಾಟಕ

karnataka

ETV Bharat / state

ಬಿಜೆಪಿ - ಕಾಂಗ್ರೆಸ್​ನ ಡಬಲ್ ಗೇಮ್‌ನಿಂದ ಮುಸ್ಲಿಮರು ಅತಂತ್ರ: MLC ಬಿ.ಎಂ. ಫಾರೂಕ್ ಆಕ್ರೋಶ

ಆರ್‌ಎಸ್‌ಎಸ್ ಬೆಳೆದರೆ ಕಾಂಗ್ರೆಸ್‌ಗೆ ಹೆಚ್ಚು ಲಾಭ. ಸಂಘವನ್ನು ತೋರಿಸಿ ಮುಸ್ಲಿಮರ ಮತಗಳನ್ನು ಸುಲಭವಾಗಿ ಪಡೆಯುತ್ತಾರೆ. ಅದಕ್ಕಾಗಿ ಕಾಂಗ್ರೆಸ್ ಕೂಡ ಆರ್‌ಎಸ್‌ಎಸ್‌ಗೆ ಪರೋಕ್ಷವಾಗಿ ಬೆಂಬಲ ಕೊಡುತ್ತಾ ಬಂದಿದೆ ಎಂದು ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಕಾಂಗ್ರೆಸ್​ ವಿರುದ್ಧ ಕಿಡಿಕಾರಿದ್ದಾರೆ.

mlc-farooq-statement-on-congress-and-bjp
ಎಂಎಲ್​ಸಿ ಬಿಎಂ ಫಾರೂಕ್

By

Published : Oct 23, 2021, 8:56 PM IST

ಬೆಂಗಳೂರು: ಬಿಜೆಪಿ ಮತ್ತು ಕಾಂಗ್ರೆಸ್​ನ ಡಬಲ್ ಗೇಮ್‌ನಿಂದ ಮುಸ್ಲಿಮರು ಅತಂತ್ರರಾಗಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳು ಮುಸಲ್ಮಾನರ ಹಿತಾಸಕ್ತಿಯನ್ನು ರಕ್ಷಿಸಲು ವಿಫಲವಾಗಿವೆ ಎಂದು ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಕೋಮುವಾದ ಮತ್ತು ಮತೀಯವಾದಿ ಶಕ್ತಿಗಳನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುತ್ತಿದೆ. ಕಾಂಗ್ರೆಸ್ ಮುಸ್ಲಿಮರನ್ನು ಎತ್ತಿ ಕಟ್ಟಿ ರಾಜಕೀಯ ಮಾಡುತ್ತಿದೆ. ಎರಡು ಪಕ್ಷದ ನಡುವೆ ವ್ಯತ್ಯಾಸವೇನೂ ಇಲ್ಲ. ಆರ್‌ಎಸ್‌ಎಸ್ ಬೆಳೆದರೆ ಕಾಂಗ್ರೆಸ್‌ಗೆ ಹೆಚ್ಚು ಲಾಭ. ಸಂಘವನ್ನು ತೋರಿಸಿ ಮುಸ್ಲಿಮರ ಮತಗಳನ್ನು ಸುಲಭವಾಗಿ ಪಡೆಯುತ್ತಾರೆ. ಅದಕ್ಕಾಗಿ ಕಾಂಗ್ರೆಸ್ ಕೂಡ ಆರ್‌ಎಸ್‌ಎಸ್‌ಗೆ ಪರೋಕ್ಷವಾಗಿ ಬೆಂಬಲ ಕೊಡುತ್ತಾ ಬಂದಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.

ಜಮೀರ್​​​​ ಅನುಕಂಪಕ್ಕೆ ಅರ್ಥವಿಲ್ಲ: ಮುಸ್ಲಿಮರ ಬಗ್ಗೆ ಈಗ ಮೊಸಳೆ ಕಣ್ಣೀರು ಸುರಿಸುತ್ತಿರುವ ಕಾಂಗ್ರೆಸ್‌ನ ಇತಿಹಾಸವನ್ನು ಒಮ್ಮೆ ತಿರುಗಿ ನೋಡಿದರೆ ಮುಸ್ಲಿಮರಿಗೆ ರಾಜಕೀಯವಾಗಿ ಮೋಸ ಮಾಡಿದ ಎಷ್ಟೊಂದು ಪ್ರಕರಣಗಳಿವೆ ಎನ್ನುವುದು ಗೊತ್ತಾಗುತ್ತದೆ.

ಜೆಡಿಎಸ್ ವರಿಷ್ಠ ಹೆಚ್. ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಈ ಹಿಂದೆ ನನ್ನನ್ನು ಜೆಡಿಎಸ್‌ನ ರಾಜ್ಯಸಭಾ ಅಭ್ಯರ್ಥಿಯನ್ನಾಗಿಸಿದಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಜಮೀರ್ ಅಹ್ಮದ್ ಮತ್ತವರ ಶಾಸಕ ಮಿತ್ರರು ಪಕ್ಷಾಂತರ ಮಾಡಿ ಸೋಲಿಸಿದ್ದು, ಎಲ್ಲರಿಗೂ ಗೊತ್ತಿರುವ ವಿಷಯ. ಈಗ ನನ್ನ ಬಗ್ಗೆ ಶಾಸಕ ಜಮೀರ್ ಅಹ್ಮದ್ ಅವರು ಅನುಕಂಪ ವ್ಯಕ್ತಪಡಿಸಿರುವುದಕ್ಕೆ ಅರ್ಥವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಕುಮಾರಸ್ವಾಮಿ ಕಾಂಗ್ರೆಸ್​ ಯಾಕೆ ಟೀಕಿಸುತ್ತದೆ: ಸಿದ್ದರಾಮಯ್ಯ ಸಿಎಂ ಅಗಿದ್ದಾಗ ಕರಾವಳಿಯಲ್ಲಿ ಸಂಘ ಪರಿವಾರದ ಅಟ್ಟಹಾಸ ನಡೆದಿತ್ತು. ಕಾಂಗ್ರೆಸ್ ನಾಯಕರು ಪರಿಸ್ಥಿತಿಯನ್ನು ನಿಯಂತ್ರಿಸುವ ಪ್ರಯತ್ನ ಮಾಡಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಆರ್‌ಎಸ್‌ಎಸ್ ಅಟ್ಟಹಾಸ ಮತ್ತಷ್ಟು ಹೆಚ್ಚಾಗಿದೆ.

ಈಗ ಕುಮಾರಸ್ವಾಮಿಯವರು ಆರ್‌ಎಸ್‌ಎಸ್‌ನ ಒಳಹೂರಣವನ್ನೆಲ್ಲಾ ಬಯಲುಗೊಳಿಸುತ್ತಿರುವಾಗ ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ಅವರನ್ನು ಟೀಕಿಸುತ್ತಿರುವುದು ಏಕೆ? ಸಾಧ್ಯವಾದರೆ ಕುಮಾರಸ್ವಾಮಿ ಅವರಿಗೆ ಬೆಂಬಲ ಕೊಡಬೇಕು. ಅಲ್ಪಸಂಖ್ಯಾತರಿಗೆ ಎರಡೂ ಪಕ್ಷಗಳ ಡಬಲ್ ಗೇಮ್ ಚೆನ್ನಾಗಿ ಅರ್ಥವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್​​​ಎಸ್​ಎಸ್​ ಜೊತೆ ಮುಸ್ಲಿಂ ನಾಯಕರ ಕಣ್ಣಾಮುಚ್ಚಾಲೆ: ಕರಾವಳಿಯ ಕೆಲವು ಮುಸ್ಲಿಂ ನಾಯಕರು ಆರ್‌ಎಸ್‌ಎಸ್ ಜತೆಗೆ ಕಣ್ಣಾಮುಚ್ಚಾಲೆ ಆಟ ನಡೆಸುತ್ತಿದ್ದಾರೆ. ಈಗ ಕುಮಾರಸ್ವಾಮಿ ಅವರು ಆರ್‌ಎಸ್‌ಎಸ್ ಅನ್ನು ಟೀಕಿಸಿದಾಗ ಎಚ್ಚರಗೊಂಡು ಹೆಚ್ ಡಿಕೆ ಅವರನ್ನು ಟೀಕಿಸುತ್ತಿದ್ದಾರೆ. ಕರಾವಳಿಯಲ್ಲಿ ಆರ್‌ಎಸ್‌ಎಸ್ ಬಲಗೊಳ್ಳಲು ಕಾಂಗ್ರೆಸ್ ನಾಯಕರೇ ಕಾರಣ ಎಂದು ಗುಡುಗಿದರು.

ಜಮೀರ್​ ಪರ ಬ್ಯಾಟಿಂಗ್​ ಮಾಡುವ ಅಗತ್ಯವಿಲ್ಲ: ನನಗೆ ರಾಜಕೀಯವಾಗಿ ನಾಟಕ ಮಾಡಲು ಬರುವುದಿಲ್ಲ. ನನ್ನನ್ನು ಸಚಿವನನ್ನಾಗಿ ಎಂದು ಮುಖ್ಯಮಂತ್ರಿಯಾಗಿದ್ದ ವೇಳೆ ಕುಮಾರಸ್ವಾಮಿ ಅವರಿಗೆ ಯಾವತ್ತೂ ಕೇಳಿಕೊಂಡಿಲ್ಲ. ರಾಜಕೀಯದಲ್ಲಿ ಏನೇನೋ ನಡೆಯುತ್ತದೆ, ಅದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಈಗ ನನ್ನ ಪರವಾಗಿ ಜಮೀರ್ ಅಹ್ಮದ್ ಬ್ಯಾಟಿಂಗ್ ಮಾಡುವ ಅಗತ್ಯವಿಲ್ಲ. ದೇವರು ಇಚ್ಛಿಸಿದರೆ ನಾನು ಯಾವತ್ತಾದರೂ ಸಚಿವನಾಗುತ್ತೇನೆ. ಅದಕ್ಕಾಗಿ ಪಕ್ಷಾಂತರ ಮಾಡಿಸುವುದು, ಸುಳ್ಳು ಹೇಳುವುದು ನನಗೆ ಬರುವುದಿಲ್ಲ ತಿರುಗೇಟು ನೀಡಿದ್ದಾರೆ.

ಜೆಡಿಎಸ್‌ನಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಜೊತೆಗೆ ಗಟ್ಟಿಯಾಗಿ ನಿಂತಿದ್ದೇನೆ. ಜಮೀರ್ ಮತ್ತು ಇತರರ ಹಾಗೆ ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವವನು ನಾನಲ್ಲ. ಕಾಂಗ್ರೆಸ್‌ನಲ್ಲಿ ಇರುವವರೆಲ್ಲ ದೊಡ್ಡ ಮುಸ್ಲಿಂ ನಾಯಕರೇ. ಆದರೆ, ಇವರು ಮುಸ್ಲಿಮರಿಗಾಗಿ ಮಾಡಿದ್ದೇನು? ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿಯಾಗಿದ್ದ ರಾಜೀವ್‌ ಗಾಂಧಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯ ವಿವಾದಿತ ಸ್ಥಳದ ಬೀಗ ತೆಗೆದಾಗ ಈ ಮುಸ್ಲಿಂ ನಾಯಕರು ತುಟಿ ಬಿಚ್ಚಲಿಲ್ಲ. ಆಮೇಲೆ ಇದೇ ಕಾಂಗ್ರೆಸ್‌ನ ಪ್ರಧಾನಿ ನರಸಿಂಹರಾಯರು ಬಾಬ್ರಿ ಮಸೀದಿಯನ್ನು ಆರ್‌ಎಸ್‌ಎಸ್‌ನವರು ಹಾಡುಹಗಲೇ ಒಡೆದು ಹಾಕಿದಾಗ ಬಾಯಿ ಮುಚ್ಚಿಕೊಂಡು ಸುಮ್ಮನೆ ಕುಳಿತಿದ್ದರು. ಆರ್‌ಎಸ್‌ಎಸ್ ಮತ್ತು ಬಿಜೆಪಿ ಜತೆಗೂಡಿ ಹೂಡಿದ ಸಂಚು ಅದಾಗಿದೆ ಎಂದು ಹೇಳಿದ್ದಾರೆ.

ABOUT THE AUTHOR

...view details