ಕರ್ನಾಟಕ

karnataka

ETV Bharat / state

ವಿಧಾನ ಪರಿಷತ್ ಪದವೀಧರ, ಶಿಕ್ಷಕರ ಕ್ಷೇತ್ರಗಳ ಚುನಾವಣೆ: ಸೆ.30ರಿಂದ ಮತದಾರರ ನೋಂದಣಿ ಪ್ರಕ್ರಿಯೆ ಆರಂಭಿಸಲು ಸಿಇಸಿ ಸೂಚನೆ - ಬೆಂಗಳೂರು

MLC Election: 2024ರ ಜೂನ್ ತಿಂಗಳಲ್ಲಿ ಆರು ಮಂದಿಯ ಸದಸ್ಯತ್ವ ಮುಕ್ತಾಯವಾಗಲಿದೆ. ಹಾಗೂ ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಸೇರಿರುವ ಪುಟ್ಟಣ್ಣ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ. ಹೀಗಾಗಿ ಒಟ್ಟು ಏಳು ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

Central Election Commission
ಕೇಂದ್ರ ಚುನಾವಣಾ ಆಯೋಗ

By

Published : Aug 12, 2023, 8:50 AM IST

ಬೆಂಗಳೂರು: ವಿಧಾನ ಪರಿಷತ್‌ಗೆ ನಡೆಯುವ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತದಾರರ ಪಟ್ಟಿಯನ್ನು ಸಿದ್ದಪಡಿಸುವಂತೆ ಕೇಂದ್ರ ಚುನಾವಣಾ ಆಯೋಗ (ಸಿಇಸಿ) ಸೂಚನೆ ನೀಡಿದೆ. ಸೆಪ್ಟೆಂಬರ್ 30 ರಿಂದ ಮತದಾರರ ನೋಂದಣಿ ಪ್ರಕ್ರಿಯೆ ಆರಂಭಿಸಲು ಸೂಚನೆ ನೀಡಿದೆ.

ನವೆಂಬರ್ 6ರಂದು ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನವಾಗಿದೆ. ಮತದಾರರ ಪಟ್ಟಿ ಕರಡು ಸಿದ್ದಪಡಿಸಲು ನ.20 ಕಡೆಯ ದಿನ. ನ.23 ರಂದು ಕರಡು ಪಟ್ಟಿಯನ್ನು ಪ್ರಕಟಿಸಬೇಕು. ನ.23 ರಿಂದ ಡಿ.9 ರವರೆಗೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನವಾಗಿದೆ. ಡಿ.25 ರಂದು ಆಕ್ಷೇಪಣೆಗಳ ವಿಲೇವಾರಿ ನಡೆಯಲಿದೆ. ಡಿ.30 ರಂದು ಅಂತಿಮವಾಗಿ ಮತದಾರರ ಪಟ್ಟಿಯನ್ನು ಪ್ರಕಟಿಸಬೇಕು ಎಂದು ಆಯೋಗ ತಿಳಿಸಿದೆ.

ಒಟ್ಟು ಏಳು ಸ್ಥಾನಕ್ಕೆ ಚುನಾವಣೆ:2024ರ ಜೂನ್ ತಿಂಗಳಲ್ಲಿ ಆರು ಮಂದಿಯ ಸದಸ್ಯತ್ವ ಮುಕ್ತಾಯವಾಗಲಿದೆ. ಹಾಗೂ ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಸೇರಿರುವ ಪುಟ್ಟಣ್ಣ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ. ಹೀಗಾಗಿ ಒಟ್ಟು ಏಳು ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಈಶಾನ್ಯ ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿರುವ ಡಾ.ಚಂದ್ರಶೇಖರ್ ಬಿ. ಪಾಟೀಲ್, ನೈರುತ್ಯ ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿರುವ ಆಯನೂರು ಮಂಜುನಾಥ್, ಬೆಂಗಳೂರು ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿರುವ ಎ.ದೇವೇಗೌಡ, ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ಡಾ.ವೈ.ಎ ನಾರಾಯಣಸ್ವಾಮಿ, ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ಎಸ್.ಎಲ್ ಭೋಜೇಗೌಡ, ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ಮರಿತಿಬ್ಬೇಗೌಡ ಅವರ ಅವಧಿ 2024ರ ಜೂನ್ ತಿಂಗಳಿಗೆ ಮುಕ್ತಾಯವಾಗಲಿದ್ದು, ಸಾರ್ವತ್ರಿಕ ಚುನಾವಣೆ ನಡೆಯಲಿದೆ.

ಪುಟ್ಟಣ್ಣ ಸ್ಥಾನಕ್ಕೆ ಉಪಚುನಾವಣೆ: ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಪುಟ್ಟಣ್ಣ ಅವಧಿಯು 2026ರ ನವೆಂಬರ್‌ಗೆ ಮುಕ್ತಾಯವಾಗುತ್ತಿತ್ತು. ಆದರೆ, ಪುಟ್ಟಣ್ಣ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ಹಿನ್ನೆಲೆ ಮೇಲ್ಮನೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಅವರ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.

ವಿಧಾನ ಪರಿಷತ್ ಸದಸ್ಯ ಸ್ಥಾನ ನಾಮನಿರ್ದೇಶನಕ್ಕೆ ಆಕ್ಷೇಪ: ಇತ್ತೀಚೆಗೆ(ಆ.5) ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನಾಮ‌ನಿರ್ದೇಶನ ಶಿಫಾರಸು ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ದೂರು ದಾಖಲಾದ ಹಿನ್ನೆಲೆ ಪರಿಶೀಲನೆ ನಡೆಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರು ಸೂಚನೆ ನೀಡಿದ್ದರು. ರಾಜ್ಯಪಾಲರಿಗೆ ಕರ್ನಾಟಕ ರಾಜ್ಯ ಮುಸ್ಲಿಂ ಜನ ಜಾಗೃತಿ ವೇದಿಕೆ ಮತ್ತು ನ್ಯಾಯಮಿತ್ರ ಸಂಘಟನೆಯ ಕಾರ್ಯದರ್ಶಿ ರಾಘವಾಚಾರ್ ಶಾಸ್ತ್ರಿ ಅವರು ದೂರು ನೀಡಿದ್ದರು. ಈ ದೂರು ಹಿನ್ನೆಲೆ ಆರೋಪದ ಬಗ್ಗೆ ಪರಿಶೀಲನೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರು ಸೂಚನೆ ನೀಡಿದ್ದರು.

ಎಂ ಆರ್ ಸೀತಾರಾಮ್, ಸುಧಾಮ್ ದಾಸ್ ಮತ್ತು ಮನ್ಸೂರ್ ಖಾನ್ ನಾಮನಿರ್ದೇಶನ ಶಿಫಾರಸು ಬಗ್ಗೆ ಆಕ್ಷೇಪಿಸಲಾಗಿತ್ತು. ಈ ಸಂಬಂಧ ರಾಜ್ಯಪಾಲರಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪರಿಶೀಲಿಸುವಂತೆ ನಿರ್ದೇಶನ ನೀಡಿದ್ದರು. ಸಾಮಾಜಿಕ ಸೇವೆ ಕ್ಷೇತ್ರದಲ್ಲಿ ಸುಧಾಮ್ ದಾಸ್, ಶಿಕ್ಷಣ ಕ್ಷೇತ್ರದಲ್ಲಿ ಎಂ. ಆರ್. ಸೀತಾರಾಮ್ ಮತ್ತು ಸಹಕಾರ ಕ್ಷೇತ್ರದಿಂದ ಮನ್ಸೂರ್ ಖಾನ್ ಅವರನ್ನು ವಿಧಾನಪರಿಷತ್ ಸ್ಥಾನಕ್ಕೆ ನಾಮನಿರ್ದೇಶನ ಮಾಡಿ ಶಿಫಾರಸು ಮಾಡಲಾಗಿತ್ತು. ಜುಲೈ 29ಕ್ಕೆ ಮೂವರ ನಾಮನಿರ್ದೇಶನಕ್ಕೆ ಆಕ್ಷೇಪ ವ್ಯಕ್ತಪಡಿಸಿ ರಾಜ್ಯಪಾಲರಿಗೆ ದೂರು ನೀಡಲಾಗಿತ್ತು.

ಇದನ್ನೂ ಓದಿ:ವಿಧಾನ ಪರಿಷತ್ ಸದಸ್ಯ ಸ್ಥಾನ ನಾಮನಿರ್ದೇಶನಕ್ಕೆ ಆಕ್ಷೇಪ: ಪರಿಶೀಲಿಸುವಂತೆ ಸಿಎಸ್​​ಗೆ ರಾಜ್ಯಪಾಲರ ಸೂಚನೆ

ABOUT THE AUTHOR

...view details