ಮೇಲ್ಮನೆ ಉಪಚುನಾವಣೆ: ಸವದಿಗೆ ಮಣೆ ಹಾಕಿದ ಹೈಕಮಾಂಡ್! - ವಿಧಾನ ಪರಿಷತ್ ಉಪಚುನಾವಣೆ ಸುದ್ದಿ
ಶಾಸಕರಾಗಿ ಚುನಾಯಿತರಾಗಿರುವ ರಿಜ್ವಾನ್ ಅರ್ಷದ್ರಿಂದ ತೆರವಾಗಿರುವ ಪರಿಷತ್ ಸ್ಥಾನದ ಉಪ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಲಕ್ಷ್ಮಣ ಸವದಿಗೆ ಟಿಕೆಟ್ ನೀಡಿದೆ.
ಬೆಂಗಳೂರು: ಕೊನೆಗೂ ವಿಧಾನ ಪರಿಷತ್ ಉಪ ಚುನಾವಣೆಗೆ ಯಾರು ಸ್ಪರ್ಧಿಸುತ್ತಾರೆ ಎಂಬ ಗೊಂದಲಕ್ಕೆ ಬಿಜೆಪಿ ಹೈಕಮಾಂಡ್ ತೆರೆ ಎಳೆದಿದೆ.
ಶಾಸಕರಾಗಿ ಚುನಾಯಿತರಾಗಿರುವ ರಿಜ್ವಾನ್ ಅರ್ಷದ್ರಿಂದ ತೆರವಾಗಿರುವ ಪರಿಷತ್ ಸ್ಥಾನದ ಉಪ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಲಕ್ಷ್ಮಣ ಸವದಿಗೆ ಟಿಕೆಟ್ ನೀಡಿದೆ. ಆ ಮೂಲಕ ಲಕ್ಷ್ಮಣ್ ಸವದಿ ಹಾಗೂ ಆರ್.ಶಂಕರ್ ಇಬ್ಬರಲ್ಲಿ ಯಾರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಗೊಂದಲಕ್ಕೆ ಇದೀಗ ತೆರೆ ಬಿದ್ದಿದೆ.
ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಲಕ್ಷ್ಮಣ್ ಸವದಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಸಚಿವ ಸ್ಥಾನ ಉಳಿಸಿಕೊಳ್ಳಲು ಲಕ್ಷ್ಮಣ್ ಸವದಿ ಆರು ತಿಂಗಳಲ್ಲಿ ಚುನಾಯಿತರಾಗುವುದು ಅನಿವಾರ್ಯವಾಗಿತ್ತು. ಅದರಂತೆ ಸಚಿವರಾಗಿ ಮುಂದುವರಿಯಲು ಸವದಿ ಫೆ.20ರೊಳಗೆ ಚುನಾಯಿತರಾಗಬೇಕಾಗಿತ್ತು. ಹೀಗಾಗಿ ಸವದಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದೆ.
ಫೆ.17ಕ್ಕೆ ವಿಧಾಪರಿಷತ್ಗೆ ಉಪಚುನಾವಣೆ ನಡೆಯಲಿದೆ. ಫೆ.6 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಈಗ ಪರಿಷತ್ ಸದಸ್ಯನಾಗಿ ಚುನಾಯಿತರಾಗುವವರ ಅವಧಿ ಜೂನ್ 14, 2022ರವರೆಗೆ ಇರಲಿದೆ. ವಿಧಾನಸಭೆಯಲ್ಲಿನ ಸಂಖ್ಯಾಬಲವನ್ನು ನೋಡಿದರೆ ಬಿಜೆಪಿ ಮೇಲುಗೈ ಹೊಂದಿದೆ.